ಜೈಪುರ: ಮೇಲ್ಜಾತಿಯ ಶಾಲಾ ಶಿಕ್ಷಕರ ಥಳಿತಕ್ಕೊಳಗಾಗಿ ದಲಿತ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆಯಿಂದ ಮನನೊಂದು ಆ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಾನ್ ಚಂದ್ ಮೇಘವಾಲ್ ಎಂಬುವವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಅವರು ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಮತ್ತು ವಿಧಾನಸಭೆ ಸ್ಪೀಕರ್ ಅವರಿಗೆ ರವಾನಿಸಿದ್ದಾರೆ.
ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿದೆ. ಆದರೆ ಇಷ್ಟು ವರ್ಷಗಳ ನಂತರವೂ ರಾಜ್ಯದಲ್ಲಿ ದೀನದಲಿತ ಮತ್ತು ಶೋಷಿತ ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ತನಗೆ ತೀವ್ರ ನೋವುಂಟು ಮಾಡಿವೆ. ಇಂದು ನನ್ನ ಸಮಾಜ ಅನುಭವಿಸುತ್ತಿರುವ ಹಿಂಸೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಮೇಘವಾಲ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ಆರ್ಥಿಕ ನೆರವು ಮತ್ತು ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವಂತೆ ನಾನು ಒತ್ತಾಯಿಸಿ 24 ಗಂಟೆ ಕಳೆದರೂ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದರಿಂದ ತಾನು ರಾಜೀನಾಮೆ ನೀಡಿರುವುದಾಗಿ ಶಾಸಕ ಮೇಘವಾಲ್ ತಿಳಿಸಿದ್ದಾರೆ.
ಕುಡಿಯುವ ನೀರಿನ ಪಾತ್ರೆಯನ್ನು ಮುಟ್ಟಿದ ಕಾರಣಕ್ಕಾಗಿ ಖಾಸಗಿ ಶಾಲಾ ಶಿಕ್ಷಕರೊಬ್ಬರು 9 ವರ್ಷದ ಪರಿಶಿಷ್ಟ ಜಾತಿಯ ಬಾಲಕ ಇಂದ್ರ ಮೇಘವಾಲ್ ನನ್ನು ಥಳಿಸಿದ್ದರು. ಆ ಬಾಲಕ ಕಳೆದ ಶನಿವಾರ ಮೃತಪಟ್ಟಿದ್ದ. ಈ ಸಂದರ್ಭದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.