ಅಮರಾವತಿ: ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ನೀರಾವರಿ ಇಲಾಖೆಯ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದರಿಂದ ಅದನ್ನು ಕೆಡವಲಾಗಿದೆ ಎಂದು ತೆಲುಗು ದೇಶಂ ಪಕ್ಷ ಶನಿವಾರ ಹೇಳಿದೆ.
ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಆಡಳಿತ ಪಕ್ಷದ ಪ್ರಕಾರ ಟಿಡಿಪಿ ಮುಖಂಡರೊಬ್ಬರ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ನೀರಾವರಿ ಇಲಾಖೆಯ ಎರಡು ಎಕರೆ ಜಾಗದಲ್ಲಿ ವಿರೋಧ ಪಕ್ಷದ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗುತ್ತಿದೆ ಎಂದು ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಸಿಆರ್ಡಿಎ) ಮತ್ತು ಮಂಗಳಗಿರಿ ತಾಡೆಪಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಟಿಎಂಸಿ) ಪೌರಾಯುಕ್ತರಿಗೆ ದೂರು ನೀಡಲಾಗಿದೆ. “ಇದನ್ನು ಅನುಸರಿಸಿ, ವೈಎಸ್ಆರ್ಸಿಪಿ ನಾಯಕರ ಈ ಅಕ್ರಮ ನಿರ್ಮಾಣಗಳ ನೆಲಸಮವನ್ನು ಎಂಟಿಎಂಸಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ” ಎಂದು ಟಿಡಿಪಿ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ವೈಎಸ್ ಆರ್ ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಪಕ್ಷದ ಕಚೇರಿ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲು ಸಿಎಂ ಆಗಿ ತಮ್ಮ ಅಧಿಕಾರವನ್ನು ‘ದುರುಪಯೋಗ’ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. “ಜಗನ್ ಮೋಹನ್ ರೆಡ್ಡಿ ಅವರು ಈ ಎರಡು ಎಕರೆಯಲ್ಲಿ ಕಚೇರಿ ನಿರ್ಮಿಸುವ ಮೂಲಕ ನೆರೆಯ 15 ಎಕರೆಯನ್ನು ಆಕ್ರಮಿಸಲು ಯೋಜಿಸಿದ್ದರು. ಈ ಎರಡು ಎಕರೆಯನ್ನು ವೈಎಸ್ ಆರ್ಸಿಪಿಗೆ ಹಸ್ತಾಂತರಿಸಲು ನೀರಾವರಿ ಇಲಾಖೆ ಅನುಮತಿ ನೀಡಿಲ್ಲ ಎಂದು ಈಗ ಸ್ಪಷ್ಟಪಡಿಸಲಾಗಿದೆ,” ಎಂದು ಟಿಡಿಪಿ ಆರೋಪಿಸಿದೆ.