Home ಟಾಪ್ ಸುದ್ದಿಗಳು ಟಿ20 ವಿಶ್ವಕಪ್ | ದೀಪಾವಳಿ ಸಂಭ್ರಮಾಚರಣೆಯಿಂದ ದೂರ ಉಳಿದ ಟೀಮ್ ಇಂಡಿಯಾ

ಟಿ20 ವಿಶ್ವಕಪ್ | ದೀಪಾವಳಿ ಸಂಭ್ರಮಾಚರಣೆಯಿಂದ ದೂರ ಉಳಿದ ಟೀಮ್ ಇಂಡಿಯಾ

ಮೆಲ್ಬೋರ್ನ್: ಕೊಹ್ಲಿ ʻಮಾಸ್ಟರ್ ಕ್ಲಾಸ್ʼ ಪ್ರದರ್ಶನದ ನೆರವಿನಿಂದ ಭಾನುವಾರ ನಡೆದಿದ್ದ ಮಹತ್ವದ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ 4 ವಿಕೆಟ್ಗಳ ಅಮೋಘ ಜಯ ದಾಖಲಿಸಿತ್ತು. ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ಪ್ರಮುಖರು ದೀಪಾವಳಿ ಆಚರಣೆ ಮೆಲ್ಬೋರ್ನ್‌ನಲ್ಲಿ ಆರಂಭವಾಗಿದೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.

ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ಸಿಡ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಭರ್ಜರಿ ದೀಪಾವಳಿ ಡಿನ್ನರ್ ಪಾರ್ಟಿ ಆಯೋಜಿಸಲಾಗಿತ್ತು. ಖಾಸಗಿ ಹೊಟೇಲ್‌ನಲ್ಲಿ ನಿಗದಿಯಾಗಿದ್ದ ಸಂಭ್ರಮಾಚರಣೆಗೆ ಆಟಗಾರರು ಪತ್ನಿ, ಮಕ್ಕಳ ಸಮೇತ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಹಾಗೂ ಗೆಲುವಿನ ರುವಾರಿ ವಿರಾಟ್ ಕೊಹ್ಲಿ ತಂಡದ ಸಹ ಆಟಗಾರರಿಗೆ ʻಹೊರಹೋಗಬೇಡಿ, ದೊಡ್ಡ ಗುರಿಯತ್ತ ಗಮನಹರಿಸಿ, ಸಂಭ್ರಮಾಚರಣೆಯಿಂದ ದೂರ ಇರಿʼ ಎಂದು ಸಲಹೆ ನೀಡಿದ್ದಾರೆ.

ಪಂದ್ಯದ ಬಳಿಕ ಆಟಗಾರರು ನೇರವಾಗಿ ಹೊಟೇಲ್ ಕೊಠಡಿಗೆ ಮರಳಿ ವಿಶ್ರಾಂತಿ ಪಡೆದಿದ್ದಾರೆ. ಸಾಮಾನ್ಯವಾಗಿ ಗೆದ್ದ ತಂಡವು ತಾವು ಉಳಿದುಕೊಂಡಿರುವ ಹೊಟೇಲ್ ಗೆ ಮರಳಿದಾಗ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲಾಗುತ್ತದೆ. ಆದರೆ ಪಾಕ್ ವಿರುದ್ಧದ ಗೆಲುವಿನ ಬಳಿಕ ಇದನ್ನೂ ಸಹ ಕೈಬಿಡಲಾಗಿತ್ತು. ಪಂದ್ಯದ ನಂತರದ ಸಭೆಯಲ್ಲಿ, ಟೂರ್ನಿಯಲ್ಲಿ ತಂಡವು ಸಾಗಬೇಕಿರುವ ದೀರ್ಘಾವಧಿಯ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯುವಂತೆ ಸಲಹೆ ನೀಡಲಾಗಿತ್ತು. ನಾವು ಉತ್ತಮ ಆರಂಭ ಪಡೆದಿದ್ದೇವೆ ನಿಜ. ಈ ಪ್ರದರ್ಶನವನ್ನು ಮುಂದುವರಿಸಬೇಕಾಗಿದೆ. ವಿಶ್ವಕಪ್ ಕೂಟವು ಇನ್ನೂ ಮುಗಿದಿಲ್ಲ, ಗುರಿಯತ್ತ ಗಮನ ಹರಿಸಿ ಎಂದು ಆಟಗಾರರಿಗೆ ತಿಳಿಸಲಾಗಿತ್ತುʼ. ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನ ವಿರುದ್ಧದ ಗೆಲುವಿನ ಬಳಿಕ ಆಟಗಾರರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅದಾಗಿಯೂ ಹಿರಿಯ ಆಟಗಾರರ ಸಲಹೆಯ ಮೇರೆಗೆ ಸಿಡ್ನಿ ನಗರದಲ್ಲಿ ಆಯೋಜಿಸಲಾಗಿದ್ದ ಭರ್ಜರಿ ದೀಪಾವಳಿ ಸಂಭ್ರಮಾಚರಣೆಯಲ್ಲಿ ಭಾಗವಹಿಸದೇ ಇರಲು ಆಟಗಾರರು ನಿರ್ಧರಿಸಿದ್ದರು. ದೀಪಾವಳಿ ಹಿನ್ನಲೆಯಲ್ಲಿ ಸಿಡ್ನಿಯ ಐತಿಹಾಸಿಕ ʻಒಪೇರಾ ಹೌಸ್ʼ ಕಡುಗೆಂಪು ಕೆಂಪು ಬಣ್ಣದಿಂದ ಕಂಗೊಳಿಸುತ್ತಿದೆ.

Join Whatsapp
Exit mobile version