Home ಟಾಪ್ ಸುದ್ದಿಗಳು 60 ವರ್ಷಗಳಿಂದ ಸ್ನಾನ ಮಾಡದ ವ್ಯಕ್ತಿ ನಿಧನ

60 ವರ್ಷಗಳಿಂದ ಸ್ನಾನ ಮಾಡದ ವ್ಯಕ್ತಿ ನಿಧನ

ಇರಾನ್: ಸುಮಾರು 60 ವರ್ಷಗಳಿಂದ ಸ್ನಾನ ಮಾಡದ್ದಕ್ಕಾಗಿ “ಜಗತ್ತಿನ ಅತ್ಯಂತ ಕೊಳಕು ಮನುಷ್ಯ” ಎಂದು ಹೆಸರುವಾಸಿಯಾಗಿದ್ದ ಇರಾನಿನ ವ್ಯಕ್ತಿಯೊಬ್ಬರು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅರ್ಧ ಶತಮಾನಕ್ಕೂ ಅಧಿಕ ಕಾಲ ಸ್ನಾನ ಮಾಡದೆ ಒಬ್ಬಂಟಿಯಾಗಿದ್ದ ಅಮೌ ಹಾಜಿ(94) ಅವರು ಇರಾನಿನ ದಕ್ಷಿಣ ಪ್ರಾಂತ್ಯದ ದೇಜ್’ಗಾ ಗ್ರಾಮದಲ್ಲಿ ಭಾನುವಾರ ನಿಧನರಾದರು ಎಂದು ಮೂಲಗಳು ತಿಳಿಸಿವೆ.

1950ರ ದಶಕದ ಮಧ್ಯಭಾಗದಿಂದ ಸ್ನಾನ ಮಾಡದೇ ಜೀವಿಸಿಸುತ್ತಿದ್ದ ಅಮೌ ಹಾಜಿ, “ಅನಾರೋಗ್ಯಕ್ಕೆ ತುತ್ತಾಗುವ ಭಯದಿಂದ ಸ್ನಾನ ಮಾಡುವುದನ್ನು ನಿಲ್ಲಿಸಿದ್ದರು” ಎಂದು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಈ ಮಧ್ಯೆ ತಿಂಗಳ ಹಿಂದೆ ಮೊದಲ ಬಾರಿಗೆ ಗ್ರಾಮಸ್ಥರು ಅವರನ್ನು ಸ್ನಾನ ಮಾಡಿಸಲು ಸ್ನಾನಗೃಹಕ್ಕೆ ಕರೆದೊಯ್ದಿದಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದವು.

ಈ ಹಿಂದೆ ಟೆಹ್ರಾನ್ ಸ್ಕೂಲ್ ಆಫ್ ಪಬ್ಲಿಕ್ ಹೀತ್‌ನಲ್ಲಿ ಪ್ಯಾರಾಸಿಟಾಲಜಿಯ ಪ್ರಾಧ್ಯಾಪಕರಾದ ಡಾ. ಘೋಲಮ್ರೇಜಾ ಮೊಲವಿ ನೇತೃತ್ವದ ವೈದ್ಯರ ತಂಡವು ಹಾಜಿ ಅವರನ್ನು ಹಲವಾರು ವೈದ್ಯಕೀಯ ಪರೀಕ್ಷೆಗೊಳಪಡಿಸಿತ್ತು. ಆದರೆ ಅವರ ದೇಹದಲ್ಲಿ ಯಾವುದೇ ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಅಥವಾ ಪರಾವಲಂಬಿಗಳು ಕಂಡುಬಂದಿಲ್ಲ” ಎಂದು ವೈದ್ಯರ ತಂಡ ವರದಿಯಲ್ಲಿ ಉಲ್ಲೇಖಿಸಿತ್ತು.

ಹಾಜಿಯವರಿಗೆ ಟ್ರೈಕಿನೋಸಿಸ್ ಎಂಬ ಕಾಯಿಲೆ ಇದ್ದು, ಅದು ಹಸಿ ಅಥವಾ ಕಡಿಮೆ ಬೇಯಿಸಿದ ಮಾಂಸವನ್ನು ತಿನ್ನುವುದರಿಂದ ಬರುವ ಕಾಯಿಲೆಯಾಗಿದೆ. ಇದರ ಹೊರತಾಗಿಯೂ ಈ ಕಾಯಿಲೆಯು ಅವರಿಗೆ ಅಸ್ವಸ್ಥತೆಯನ್ನು ಉಂಟು ಮಾಡಿಲ್ಲ ಎಂದು ವೈದ್ಯರು ತಿಳಿಸಿದ್ದರು.

2013ರಲ್ಲಿ ಅಮೌ ಹಾಜಿಯವರ ಜೀವನದ ಕುರಿತು “ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ” ಎಂಬ ಕಿರು ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗಿದೆ.

Join Whatsapp
Exit mobile version