Home ಟಾಪ್ ಸುದ್ದಿಗಳು ಟಿ20 ವಿಶ್ವಕಪ್ | ನ್ಯೂಜಿಲೆಂಡ್ ವಿರುದ್ಧದ ಟೀಮ್ ಇಂಡಿಯಾ ಅಭ್ಯಾಸ ಪಂದ್ಯ ರದ್ದು

ಟಿ20 ವಿಶ್ವಕಪ್ | ನ್ಯೂಜಿಲೆಂಡ್ ವಿರುದ್ಧದ ಟೀಮ್ ಇಂಡಿಯಾ ಅಭ್ಯಾಸ ಪಂದ್ಯ ರದ್ದು

ಬ್ರಿಸ್ಬೇನ್: ಟಿ20 ವಿಶ್ವಕಪ್ ಟೂರ್ನಿಯ ಪ್ರಧಾನ ಸುತ್ತಿನ ಪಂದ್ಯಗಳಿಗೂ ಮುನ್ನ ನಿಗದಿಯಾಗಿದ್ದ ಭಾರತ ತಂಡದ ಎರಡನೇ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿರುವ ಗಬ್ಬಾ ಕ್ರೀಡಾಂಗಣದಲ್ಲಿ ಬುಧವಾರ ನಿಗದಿಯಾಗಿದ್ದ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಣ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಸೋಮವಾರ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಬಳಗ, ಆತಿಥೇಯ ಆಸ್ಟ್ರೇಲಿಯಾ ತಂಡವನ್ನು 6 ರನ್ ಗಳಿಂದ ಸೋಲಿಸಿತ್ತು.

ಇದಕ್ಕೂ ಮೊದಲು ಪರ್ತ್ ನಲ್ಲಿ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಎರಡು ಅಭ್ಯಾಸ ಪಂದ್ಯಗಳಲ್ಲಿ ಟೀಮ್ ಇಂಡಿಯಾ ತಲಾ ಒಂದು ಗೆಲುವು ಮತ್ತು ಸೋಲು ಕಂಡಿತ್ತು.

ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 22ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ, ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಲಿದೆ. ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸೆಣಸಾಡಲಿವೆ. ಈ ಎರಡೂ ಪಂದ್ಯಗಳ ಟಿಕೆಟ್ ಗಳೆಲ್ಲವೂ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ತಂಡಗಳ ವಿರುದ್ಧ ತವರಿನಲ್ಲಿ ಸರಣಿ ಗೆದ್ದ ಹುಮ್ಮಸ್ಸಿನೊಂದಿಗೆ ರೋಹಿತ್ ಶರ್ಮಾ ಬಳಗ ಕಣಕ್ಕಿಲಿಯಲಿದೆ.

ಅಫ್ಘಾನಿಸ್ತಾನ, ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕ ಸೇರಿದಂತೆ 8 ತಂಡಗಳು ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಿದೆ. ನಮೀಬಿಯ, ನೆದರ್ಲ್ಯಾಂಡ್ಸ್, ಶ್ರೀಲಂಕಾ, ಯುಎಇ, ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಸೇರಿದಂತೆ 8 ತಂಡಗಳು ಗುಂಪು ಹಂತದಲ್ಲಿ ಅರ್ಹತಾ ಸುತ್ತಿನ ಪಂದ್ಯಗಳನ್ನಾಡುತ್ತಿವೆ. ಇದರಲ್ಲಿ ನಾಲ್ಕು ತಂಡಗಳು ಸೂಪರ್12 ಹಂತಕ್ಕೆ ಅರ್ಹತೆ ಪಡೆಯಲಿವೆ.

Join Whatsapp
Exit mobile version