Home ಟಾಪ್ ಸುದ್ದಿಗಳು ಎಸ್ ಡಿಪಿಐ ನಾಯಕರು, ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಬಂಧಿಸಿರುವುದು ಖಂಡನಾರ್ಹ: ಅಬ್ದುಲ್ ಮಜೀದ್

ಎಸ್ ಡಿಪಿಐ ನಾಯಕರು, ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಬಂಧಿಸಿರುವುದು ಖಂಡನಾರ್ಹ: ಅಬ್ದುಲ್ ಮಜೀದ್

ರಾಷ್ಟ್ರೀಯ ರಾಜಕೀಯ ಪಕ್ಷವೊಂದನ್ನು ಕಾರ್ಯನಿರ್ವಹಿಸಲು ಬಿಡದಂತಹ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿರುವುದು ದುರಂತ

ಬೆಂಗಳೂರು: ಪಿಎಫ್ ಐ ಸಂಘಟನೆ ನಿಷೇಧವನ್ನೇ ನೆಪವಾಗಿಟ್ಟುಕೊಂಡು ಎಸ್ ಡಿಪಿಐ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ವಿನಾಕಾರಣ ಮಧ್ಯರಾತ್ರಿಯಲ್ಲಿ ಬಂಧಿಸಿ ಕಿರುಕುಳ ನೀಡಲಾಗುತ್ತಿದೆ. ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಯುಎಪಿಎ ಯಂತಹ ಗಂಭೀರ ಕಾಯ್ದೆಗಳನ್ನು ಹೇರಲಾಗುತ್ತಿದೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರು ನಿರಂತರವಾಗಿ ಪೊಲೀಸ್ ಅಧಿಕಾರಿಗಳ ಜೊತೆ ಮತ್ತು ಇಲಾಖೆಯ ಜೊತೆ ಸಂಪರ್ಕದಲ್ಲಿದ್ದಾರೆ. ಹಾಗಿದ್ದು ಕೂಡ ಅವರನ್ನು ಮಧ್ಯರಾತ್ರಿ ಮನೆಗಳಿಗೆ ನುಗ್ಗಿ ಬಂಧಿಸುವ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದದರು.

ಇದು ಮಂಗಳೂರು ಪೊಲೀಸ್ ಕಮಿಷನರ್ ಹೀರೋಗಿರಿ ತೋರಿಸಲು ಅಥವಾ ಯಾರನ್ನೋ ಮೆಚ್ಚಿಸಲು ಮಾಡುತ್ತಿರುವ ಕಾರ್ಯ. ಯಾವುದೇ ವಿಚಾರಣೆ ಅಥವಾ ಮಾಹಿತಿಗೆ ಕರೆದರೆ ನಮ್ಮ ಪಕ್ಷದ ಯಾವುದೇ ರಾಜ್ಯ ನಾಯಕರು ಕೂಡ ಅವರಲ್ಲಿಗೆ ಹೋಗಿ ಅವರಿಗೆ ಬೇಕಾದ ಮಾಹಿತಿಯನ್ನು ಒದಗಿಸಿ ಕೊಡುತ್ತಾರೆ. ಆದರೆ, ಎಸ್ ಡಿಪಿಐ ಪಕ್ಷವನ್ನು ಬೆದರಿಸುವ ಉದ್ದೇಶದಿಂದ ಈ ರೀತಿಯ ದಬ್ಬಾಳಿಕೆಯನ್ನು ರಾಜ್ಯ ಬಿಜೆಪಿ ಸರ್ಕಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ರಾಜಕೀಯ ಪಕ್ಷವೊಂದನ್ನು ಕಾರ್ಯನಿರ್ವಹಿಸಲು ಬಿಡದಂತಹ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇಂತಹ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಎಸ್ ಡಿಪಿಐ ಪಕ್ಷ ತನ್ನ ರಾಜಕೀಯ ಹೋರಾಟವನ್ನು ಮುಂದುವರಿಸಲಿದೆ ಎಂದು ಘೋಷಿಸಿದರು. ಕಾಂಗ್ರೆಸ್ ಸೇರಿದಂತೆ ಎಲ್ಲ ಜಾತ್ಯತೀತ ಪಕ್ಷಗಳೂ ಒಗ್ಗೂಡಿ ಬಿಜೆಪಿಯ ದೌರ್ಜನ್ಯವನ್ನು ಎದುರಿಸಬೇಕಾಗಿದೆ ಎಂದು ಅಬ್ದುಲ್ ಮಜೀದ್ ಕರೆ ಕೊಟ್ಟರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್, ಮಂಗಳೂರು ಕಮಿಷನರ್ ಸಂವಿಧಾನದ ಪರ ಕೆಲಸ ಮಾಡುತ್ತಾ ಇದ್ದಾರೋ, ಇಲ್ಲ ಆರ್.ಎಸ್.ಎಸ್ ಆಜ್ಞೆಗಳನ್ನು ಪಾಲಿಸುತ್ತಿದ್ದಾರೋ? ಎಂದು ಪ್ರಶ್ನೆ ಮಾಡಿದರು.

ಟೀ ಅಂಗಡಿಯಲ್ಲಿ, ಹೋಟೆಲ್’ಗಳಲ್ಲಿ ಕುಳಿತು ಸಂಚು ರೂಪಿಸುತ್ತಿದ್ದರು ಎಂದು ಪಕ್ಷದ ನಾಯಕರು, ಕಾರ್ಯಕರ್ತರನ್ನು ಬಂಧಿಸಿ ಅವರ ಮೇಲೆ ಯುಎಪಿಎ ಹಾಕಿದ್ದಾರೆ, ಇದು ಕಾಗಕ್ಕ, ಗೂಬಕ್ಕನ ಕಥೆಯಂತಿದೆ ಎಂದು ಅವರು ವ್ಯಂಗ್ಯವಾಡಿದರು. ಮಂಗಳೂರು ಪೋಲಿಸ್ ಕಮಿಷನರ್ ಅವರು ಈ ಕುರಿತು ಅಣೆ ಪ್ರಮಾಣಕ್ಕೆ ಬರಲಿ ಎಂದು ಸವಾಲು ಹಾಕಿದರು.

ಸರ್ಕಾರ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದರಿಂದ ಶಶಿಕುಮಾರ್ ಅವರಿಗೂ ಏನೋ ಲಾಭ ಇದ್ದಂತೆ ಇದೆ ಎಂದು ಭಾಸ್ಕರ್ ಪ್ರಸಾದ್ ಆರೋಪಿಸಿದರು.

ಎಸ್ ಡಿಪಿಐ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದಾಳಿಯನ್ನು ನೋಡಿ ಕಾಂಗ್ರೆಸ್ ಸಂಭ್ರಮ ಪಡುತ್ತಿದೆ. ಆದರೆ ಪಕ್ಕದ ಮನೆಗೆ ತಗುಲಿದ ಬೆಂಕಿ ನಮ್ಮ ಮನೆಗೆ ಹಬ್ಬಲು ಹೆಚ್ಚು ಸಮಯ ಬೇಕಾಗಿಲ್ಲ ಎಂದು ಕಾಂಗ್ರೆಸ್ಸಿಗೂ ಇತ್ತೀಚಿನ ಘಟನೆಗಳಿಂದ ಅರಿವಾಗುತ್ತಿರಬಹುದು, ಕಾಂಗ್ರೆಸ್ ಸೇರಿದಂತೆ ಇನ್ನಿತರ ವಿರೋಧ ಪಕ್ಷಗಳು ಸಹ ಕೋಮುವಾದಿ ಬಿಜೆಪಿ ಸರ್ಕಾರದಿಂದ ಈ ರೀತಿಯ ಕಿರುಕುಳಗಳನ್ನು ಅನುಭವಿಸುತ್ತಿವೆ. ಆದರೂ ಅವರೆಲ್ಲರೂ ಮೌನವಾಗಿರುವುದು ಆಶ್ಚರ್ಯಕರ ಸಂಗತಿ ಎಂದು ಹೇಳಿದ ಅವರು, ಮೌನಕ್ಕೆ ಶರಣಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮಾನ ಮರ್ಯಾದೆ ಇದೆಯೇ? ಎಂದು ಪ್ರಶ್ನೆ ಮಾಡಿದರು.

ಎಸ್ ಡಿಪಿಐ ಕಚೇರಿಗಳನ್ನು ಎಷ್ಟೋ ಬಾರಿ ಶೋಧ ಮಾಡಿದ್ದಾರೆ. ಒಂದೇ ಒಂದು ರೇಜರ್ ಅಥವಾ ಬ್ಲೇಡ್ ಕೂಡ ಅವರಿಗೆ ಸಿಗಲಿಲ್ಲ. ಆದರೆ, ವಿಜಯದಶಮಿ ಸಂದರ್ಭದಲ್ಲಿ ಆರ್.ಎಸ್.ಎಸ್ ಮತ್ತು ಶ್ರೀರಾಮ ಸೇನೆ ಸಂಘಟನೆಗಳು ಅಷ್ಟೆಲ್ಲ ಶಸ್ತ್ರಾಸ್ತ್ರಗಳನ್ನು ಪ್ರದರ್ಶನ ಮಾಡಿದರೂ ಪೊಲೀಸರು ಕುರುಡರಾಗಿ ಕೂತಿದ್ದಾರೆ ಎಂದು ಭಾಸ್ಕರ್ ಪ್ರಸಾದ್ ಆರೋಪ ಮಾಡಿದರು.

ಮತ್ತೋರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ, ಪ್ರತಿಭಟನೆ ಮಾಡುತ್ತಾರೆ ಎನ್ನುವ ಅನುಮಾನದ ಮೇಲೆ ಮಧ್ಯರಾತ್ರಿಯಲ್ಲಿ ಎಸ್ ಡಿಪಿಐ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧನ ಮಾಡಿದ್ದಾರೆ. ಪೊಲೀಸ್ ಇಲಾಖೆಗೆ ಮಧ್ಯರಾತ್ರಿ ಇಂಥವರು ಪ್ರತಿಭಟನೆ ಮಾಡುತ್ತಾರೆ ಎಂದು ಕನಸು ಬೀಳುತ್ತಿದೆಯೇ? ಎಂದು ಕೇಳಿದರು.

ಈಗ ದೇಶದಲ್ಲಿ ಜಾರಿಯಲ್ಲಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ, ಬ್ರಿಟಿಷ್ ಆಳ್ವಿಕೆ ಅಲ್ಲ. ಎಸ್ಡಿಪಿಐ ಮೇಲೆ ಬಿಜೆಪಿ ಸರ್ಕಾರ ಮತ್ತು ಮಂಗಳೂರು ಪೊಲೀಸರು ಮುಗಿಬೀಳಲು ಕಾರಣ ಐಪಿಸಿ ಸೆಕ್ಷನ್ 107 ರ ಅಡಿಯಲ್ಲಿ ಬಂಧಿಸಲಾದ ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ತಹಸೀಲ್ದಾರರು ಸ್ಟೇಷನ್ ಬೇಲ್ ಕೊಡಬೇಕಾಗಿತ್ತು. ಆದರೆ ಅದನ್ನು ನಿರಾಕರಿಸಿ ಕಾನೂನುಬಾಹಿರವಾಗಿ ಬಂಧನವನ್ನು ವಿಸ್ತರಿಸಿದ್ದರು. ಇದರ ವಿರುದ್ಧ ಎಸ್ ಡಿಪಿಐ ಪಕ್ಷ ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದು ಇದರಿಂದ ವಿಚಲಿತರಾಗಿರುವಂತಹ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಈ ರೀತಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ನಿರೂಪಣೆ ಗೈದರು. ಬೆಂಗಳೂರು ಜಿಲ್ಲಾಧ್ಯಕ್ಷ ಮುಜಾಹಿದ್ ಪಾಶ, ರಾಜ್ಯ ಮಾಧ್ಯಮ ಉಸ್ತುವಾರಿ ರಿಯಾಝ್ ಕಡಂಬು ಉಪಸ್ಥಿತರಿದ್ದರು.

Join Whatsapp
Exit mobile version