ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಾರೂ ನೀರಿಕ್ಷಿಸದ ರೀತಿಯಲ್ಲಿ ಟೀಮ್ ಇಂಡಿಯಾದ ಅಭಿಯಾನ ಕೊನೆಗೊಂಡಿದೆ. ಇಂಗ್ಲೆಂಡ್ ಕೈಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ಭಾರತ ತಂಡದಲ್ಲಿ ಮುಂದಿನ ದಿನಗಳಲ್ಲಿ ಬದಲಾವಣೆಯ ಪರ್ವ ಆರಂಭವಾಗುವ ಲಕ್ಷಣಗಳು ಕಾಣಿಸತೊಡಗಿದೆ.
ಐಪಿಎಲ್‌ನಲ್ಲಿ ತೋರಿದ ಪ್ರದರ್ಶನದ ಬಲದಲ್ಲಿ ಟಿ20 ವಿಶ್ವಕಪ್‌ಗೆ ಪ್ರಕಟಿಸಲಾದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ದಿನೇಶ್ ಕಾರ್ತಿಕ್, ಆರ್. ಅಶ್ವಿನ್ ಹಾಗೂ ಮುಹಮ್ಮದ್ ಶಮಿ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಟಿ20 ತಂಡದಲ್ಲಿ ಸ್ಥಾನ ಪಡೆಯುವ ಯಾವುದೇ ಸಾಧ್ಯತೆಗಳಿಲ್ಲ. ಹೀಗಾಗಿ ಇಂಗ್ಲಂಡ್ ವಿರುದ್ಧದ ಸೆಮಿಫೈನಲ್ ಪಂದ್ಯ ಈ ಮೂವರ ಆಟಗಾರರ ಪಾಲಿಗೆ ವೃತ್ತಿ ಜೀವನದ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿತ್ತು ಎಂಬುದು ಬಹುತೇಕ ಸ್ಪಷ್ಟ.
ಮತ್ತೊಂದೆಡೆ ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಸ್ವರೂಪ ಬದಲಾವಣೆಗೆ ಬಿಸಿಸಿಐ ಮುಂದಾಗಿದ್ದು, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮುಂದಿನ ದಿನಗಳಲ್ಲಿ ಟಿ20 ಮಾದರಿಯಲ್ಲಿ ಆಡಬೇಕೆ –ಬೇಡವೇ ಎಂಬುದನ್ನು ಅವರೇ ನಿರ್ಧರಿಸಲಿ ಎಂದು ಹೇಳಿದೆ.