Home ಕ್ರೀಡೆ ಟಿ20 ವಿಶ್ವಕಪ್‌ | ಸೆಮಿಫೈನಲ್‌, ಫೈನಲ್‌ ಪಂದ್ಯಗಳ ನಿಯಮದಲ್ಲಿ ಬದಲಾವಣೆ ಮಾಡಿದ ಐಸಿಸಿ

ಟಿ20 ವಿಶ್ವಕಪ್‌ | ಸೆಮಿಫೈನಲ್‌, ಫೈನಲ್‌ ಪಂದ್ಯಗಳ ನಿಯಮದಲ್ಲಿ ಬದಲಾವಣೆ ಮಾಡಿದ ಐಸಿಸಿ

ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಂತಿಮ ನಾಲ್ಕರ ಘಟ್ಟವನ್ನು ಸಮೀಪಿಸಿದೆ. ಸೂಪರ್‌ 12- ಗ್ರೂಪ್‌1 ರಲ್ಲಿ ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ ತಂಡಗಳು ಮೊದಲ ಎರಡು ತಂಡಗಳಾಗಿ ಸೆಮಿಫೈನಲ್‌ ಪ್ರವೇಶಿಸಿದೆ. ಗ್ರೂಪ್‌ 2ರಲ್ಲಿ ಭಾನುವಾರ ಮೂರು ಮಹತ್ವದ ಪಂದ್ಯಗಳು ನಡೆಯಲಿದ್ದು, ಎರಡು ಸೆಮಿ ಸ್ಥಾನಕ್ಕಾಗಿ 4 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಸೂಪರ್‌ 12 ಹಂತದಲ್ಲಿ ಕೆಲ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದ ಪರಿಣಾಮ ಪಂದ್ಯದ ಚಿತ್ರಣವೇ ಬದಲಾಗಿತ್ತು. ಕೆಲ ಪಂದ್ಯಗಳು ರದ್ದಾದರೆ, ಮತ್ತೊಂದೆಡೆ ಕೆಲ ಪಂದ್ಯಗಳಲ್ಲಿ ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ ಗುರಿಯನ್ನು ಮರುನಿಗದಿಪಡಿಸಲಾಗಿತ್ತು.

ಭಾನುವಾರ ಸೂಪರ್‌ 12 ಹಂತ ಮುಗಿಯಲಿದ್ದು, ನವೆಂಬರ್‌ 9, ಬುಧವಾರದಂದು ಸಿಡ್ನಿಯಲ್ಲಿ ಮೊದಲ ಸೆಮಿಫೈನಲ್‌ ಮತ್ತು ಗುರುವಾರ ಅಡಿಲೇಡ್‌ನಲ್ಲಿ ಎರಡನೇ ಸೆಮಿಫೈನಲ್‌ ನಡೆಯಲಿದೆ. ಚಾಂಪಿಯನ್‌ ಪಟ್ಟಕ್ಕಾಗಿ ನವೆಂಬರ್‌ 13, ಭಾನುವಾರದಂದು ಮೆಲ್ಬೋರ್ನ್‌ನಲ್ಲಿ ʻಫೈನಲ್‌ ಫೈಟ್‌ʼ ನಡೆಯಲಿದೆ.

ಎರಡು ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸಬಹುದಾದ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು ಕೆಲ ನಿಯಮಗಳ ಬದಲಾವಣೆಗೆ ಮುಂದಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಟಿ20 ಪಂದ್ಯಗಳಿಗೆ ಮಳೆ ಅಡ್ಡಿಯಾದರೆ ಫಲಿತಾಂಶಕ್ಕಾಗಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ ತಲಾ ಐದು ಓವರ್‌ಗಳನ್ನು ಆಡಿಸಬೇಕು. ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಎರಡನೇ ಇನ್ನಿಂಗ್ಸ್‌ ಕನಿಷ್ಠ ಐದು ಓವರ್‌ಗಳನ್ನು ಕಾಣಲೇಬೇಕಿದೆ.

ಆದರೆ ಮಹತ್ವದ ವಿಶ್ವಕಪ್‌ ಟೂರ್ನಿಗಾಗಿ ನಿಯಮ ಬದಲಾವಣೆಗೆ ಮುಂದಾಗಿರುವ ಐಸಿಸಿ, ಎರಡು ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಫಲಿತಾಂಶ ಕಾಣಲು ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ ಹತ್ತು ಓವರ್‌ಗಳ ಆಟ ನಡೆಯಲೇಬೇಕು ಎಂದು ಹೇಳಿದೆ. ನಿಗದಿತ ದಿನದಂದು ಈ ಮೂರು ಪಂದ್ಯಗಳು ಮಳೆಯಿಂದ ರದ್ದಾದರೆ, ಮೀಸಲು ದಿನಕ್ಕೆ ಮುಂದೂಡಲ್ಪಡಲಿದೆ. ಮೀಸಲು ದಿನದಲ್ಲೂ ಮಳೆ ಮುಂದುವರಿದರೆ ಪಂದ್ಯ ರದ್ದಾಗಲಿದೆ. ಸೂಪರ್‌ 12 ಹಂತದ ಗ್ರೂಪ್‌-1 ಮತ್ತು ಗ್ರೂಪ್‌ 2 ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಎರಡು ತಂಡಗಳು ಫೈನಲ್‌ ಪ್ರವೇಶಿಸಲಿದೆ.

Join Whatsapp
Exit mobile version