ಕಲ್ಬುರ್ಗಿ: ಬಾಲಕಿಯೋರ್ವಳಿಗೆ ಅತ್ಯಾಚಾರ ಮಾಡಿದ್ದಾರೆಂಬ ಆರೋಪ ಸಾಬೀತಾಗಿ, ಅಪರಾಧಿಗೆ 23 ವರ್ಷ ಜೈಲು ಶಿಕ್ಷೆಯಾಗಿದೆ.
ಅಫಜಲಪುರ ತಾಲ್ಲೂಕಿನ ಅತನೂರ ಗ್ರಾಮದ ಮಹಮ್ಮದ್ ರಫಿ ಅಲಿಯಾಸ್ ಮಹಮ್ಮದ್ ರಫೀಕ್ ನದಾಫ ಎನ್ನುವಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಪೋಕ್ಸೊ) ನ್ಯಾಯಾಲಯವು 23 ವರ್ಷ 6 ತಿಂಗಳು ಜೈಲು ಶಿಕ್ಷೆ ನೀಡಿದೆ.
ಜೈಲು ಶಿಕ್ಷೆ ಮಾತ್ರವಲ್ಲದೆ ರೂಪಾಯಿ 27100/- ದಂಡವನ್ನೂ ನ್ಯಾಯಾಲಯ ವಿಧಿಸಿದೆ.
2020ರ ಫೆಬ್ರವರಿ ತಿಂಗಳಲ್ಲಿ ಭೀಮಾ ನದಿಯ ಬಳಿ ಮೂತ್ರ ವಿಸರ್ಜನೆಗೆ ತೆರಳಿದ್ದ ಬಾಲಕಿಗೆ ಬೆದರಿಸಿ, ಅಪಹರಿಸಿಕೊಂಡು ಅತ್ಯಾಚಾರ ಎಸಗಿದ್ದ. ಅಲ್ಲದೇ, ತನ್ನನ್ನು ಮದುವೆ ಆಗುವಂತೆ ಒತ್ತಾಯ ಹಾಕಿ ನಿರಂತರ ಮೂುರು ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದ ಎಂಬ ಆರೋಪದ ಮೇರೆಗೆ ಬಾಲಕಿಯ ಪೋಷಕರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಾಗಿತ್ತು.
ಶಿಕ್ಷೆ ಮಾತ್ರವಲ್ಲ ಬಾಲಕಿಗೆ ಕಾನೂನು ಪ್ರಾಧಿಕಾರದ ವತಿಯಿಂದ ₹5 ಲಕ್ಷ ಪರಿಹಾರ ಧನವನ್ನು ತಿಂಗಳೊಳಗಾಗಿ ನೀಡಬೇಕು ಎಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಆದೇಶದಲ್ಲಿ ತಿಳಿಸಿದ್ದಾರೆ.