Home Uncategorized ಆಸ್ಟ್ರೇಲಿಯಾ| ಟಿ20 ವಿಶ್ವಕಪ್‌ ಕಾದಾಟಕ್ಕೆ ಭೂಮಿಕೆ ಸಿದ್ಧ, ಇಂದಿನಿಂದ ಗುಂಪು ಹಂತದ ಪಂದ್ಯ

ಆಸ್ಟ್ರೇಲಿಯಾ| ಟಿ20 ವಿಶ್ವಕಪ್‌ ಕಾದಾಟಕ್ಕೆ ಭೂಮಿಕೆ ಸಿದ್ಧ, ಇಂದಿನಿಂದ ಗುಂಪು ಹಂತದ ಪಂದ್ಯ

​​​​​​​ಮೆಲ್ಬರ್ನ್: ಚುಟುಕು ಕ್ರಿಕೆಟ್‌ನ ಮಹಾಸಂಗಮ ಟಿ20 ವಿಶ್ವಕಪ್‌ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ಆಸ್ಟ್ರೇಲಿಯಾ ನೆಲದಲ್ಲಿ ಚಾಂಪಿಯನ್‌ಷಿಪ್‌ ನಡೆಯಲಿದೆ. ಅಕ್ಟೋಬರ್ 22 ರವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಬಳಿಕ, ಸೂಪರ್-12 ಹಂತ ಪ್ರಾರಂಭವಾಗಲಿದೆ.

ಭಾನುವಾರ  ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ, ಕ್ರಿಕೆಟ್‌ ಶಿಶು ನಮೀಬಿಯಾವನ್ನು ಎದುರಿಸಲಿದೆ. ಅದೇ ದಿನ ನಡೆಯುವ ಎರಡನೇ ಪಂದ್ಯದಲ್ಲಿ ಯುಎಇ- ನೆದರ್ಲೆಂಡ್ ಮುಖಾಮುಖಿಯಾಗಲಿದೆ. ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಲಿದೆ. ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನವು, ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸೆಣಸಾಡಲಿದೆ. ಈ ಎರಡೂ ಪಂದ್ಯಗಳ ಟಿಕೆಟ್‌ಗಳೆಲ್ಲವೂ ಈಗಾಗಲೇ ಸೋಲ್ಡ್‌ ಔಟ್‌ ಆಗಿದೆ.

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ತವರಿನಲ್ಲಿ ಸರಣಿ ಗೆದ್ದ ಹುಮ್ಮಸ್ಸಿನೊಂದಿಗೆ ರೋಹಿತ್‌ ಶರ್ಮಾ ಬಳಗ ಆಸ್ಟೇಲಿಯಾ ತಲುಪಿದೆ. ಈಗಾಗಲೇ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಿರುವ ಭಾರತ, ತಲಾ ಒಂದು ಪಂದ್ಯದಲ್ಲಿ ಗೆಲುವು-ಸೋಲು ಕಂಡಿದೆ.

ಕ್ಯಾಪ್ಟನ್​ ಡೇ

ಶನಿವಾರ ನಡೆದ ಕ್ಯಾಪ್ಟನ್​ ಡೇ ಕಾರ್ಯಕ್ರಮದಲ್ಲಿ ಎಲ್ಲಾ 16 ತಂಡಗಳ ನಾಯಕರು ಒಂದೇ ಫ್ರೇಮ್​​​ನಲ್ಲಿ ವಿಶ್ವಕಪ್​ ಟ್ರೋಫಿ ಜೊತೆಗೆ ಪೋಸ್​ ನೀಡಿದರು.  ಈ ಫೋಟೋವನ್ನು ಐಸಿಸಿ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.  ಇದೇ ವೇಳೆ ನಾಯಕರು, ಟೂರ್ನಿಗಾಗಿ ನಡೆಸಿರುವ ತಯಾರಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು.

ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ  8 ತಂಡಗಳು ಸೂಪರ್‌-12 ಹಂತಕ್ಕೆ ಅರ್ಹತೆ ಪಡೆದಿದೆ.  ನಮೀಬಿಯಾ, ನೆದರ್ಲ್ಯಾಂಡ್ಸ್, ಶ್ರೀಲಂಕಾ, ಯುಎಇ, ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಸೇರಿದಂತೆ 8 ತಂಡಗಳು ಗುಂಪು ಹಂತದಲ್ಲಿ ಸ್ಪರ್ಧಿಸಲಿದೆ.  ಇದರಲ್ಲಿ ನಾಲ್ಕು ತಂಡಗಳು ಸೂಪರ್‌-12 ಹಂತಕ್ಕೆ ಅರ್ಹತೆ ಪಡೆಯಲಿದೆ.

Join Whatsapp
Exit mobile version