Home ಟಾಪ್ ಸುದ್ದಿಗಳು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ| ಗಾಯಾಳು ಜಸ್‌ಪ್ರಿತ್‌ ಬುಮ್ರಾ ಸ್ಥಾನಕ್ಕೆ ಮುಹಮ್ಮದ್‌ ಸಿರಾಜ್‌ ಆಯ್ಕೆ

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ| ಗಾಯಾಳು ಜಸ್‌ಪ್ರಿತ್‌ ಬುಮ್ರಾ ಸ್ಥಾನಕ್ಕೆ ಮುಹಮ್ಮದ್‌ ಸಿರಾಜ್‌ ಆಯ್ಕೆ

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಪ್ರಮುಖ ಬೌಲರ್  ಜಸ್‌ಪ್ರಿತ್‌ ಬುಮ್ರಾ ಹೊರನಡೆದಿದ್ದಾರೆ. ಅಭ್ಯಾಸದ ವೇಳೆ ತೀವ್ರ ಬೆನ್ನುನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬುಮ್ರಾ ಸದ್ಯ ಬಿಸಿಸಿಐ ವೈದ್ಯರ ನಿರೀಕ್ಷೆಯಲ್ಲಿದ್ದಾರೆ. ಮೂಲಗಳ ಪ್ರಕಾರ ಬುಮ್ರಾ, ಮುಂದಿನ 4-5 ತಿಂಗಳು ಕ್ರಿಕೆಟ್‌ ಮೈದಾನದಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.  

ಆಫ್ರಿಕಾ ವಿರುದ್ಧದ ಉಳಿದಿರುವ ಎರಡು ಟಿ20 ಪಂದ್ಯಗಳಿಗೆ ಬುಮ್ರಾ ಸ್ಥಾನವನ್ನು, ಮತೋರ್ವ ವೇಗದ ಬೌಲರ್‌ ಮುಹಮ್ಮದ್‌ ಸಿರಾಜ್‌ ತುಂಬಲಿದ್ದಾರೆ. ಈ ಕುರಿತು ಬಿಸಿಸಿಐ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ. ಅದಾಗಿಯೂ ಟಿ20 ವಿಶ್ವಕಪ್ ತಂಡಕ್ಕೆ ಬುಮ್ರಾ ಅವರ ಬದಲಿ ಆಟಗಾರನನ್ನು ಬಿಸಿಸಿಐ ಆಯ್ಕೆ ಸಮಿತಿ ಹೆಸರಿಸಿಲ್ಲ. ಸಿರಾಜ್‌ ಅಥವಾ ಮುಹಮ್ಮದ್‌ ಶಮಿ ಬುಮ್ರಾ ಸ್ಥಾನವನ್ನು ತುಂಬುವ ಸಾಧ್ಯೆತಯಿದೆ.

ಫೆಬ್ರವರಿಯಲ್ಲಿ ಧರ್ಮಶಾಲಾದಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿಗೆ  ಸಿರಾಜ್ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದರು.  2017ರಲ್ಲಿ ಟೀಮ್‌ ಇಂಡಿಯಾಗೆ ಎಂಟ್ರಿ ಪಡೆದಿದ್ದ ಸಿರಾಜ್‌, ಇದುವರೆಗೂ ಕೇವಲ 5 ಟಿ20 ಪಂದ್ಯಗಳಲ್ಲಷ್ಟೇ ಭಾರತ ತಂಡವನ್ನು ಪ್ರತಿನಿಧಿಸಿದದು, 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡುತ್ತಿರುವ ಸಿರಾಜ್‌ 65 ಪಂದ್ಯಗಳಲ್ಲಿ 59 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಋತುವಿನ ಅಂತಿಮ ಹಂತದ ಪಂದ್ಯಗಳಿಗೆ ವಾರ್ವಿಕ್‌ಶೈರ್‌, ಸಿರಾಜ್ ಜೊತೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದೆ.  ಆ ಮೂಲಕ ಕೃನಾಲ್ ಪಾಂಡ್ಯ  ಬಳಿಕ ಈ ಋತುವಿನಲ್ಲಿ ವಾರ್ವಿಕ್‌ಷೈರ್ ಅನ್ನು ಪ್ರತಿನಿಧಿಸುವ ಎರಡನೇ ಭಾರತೀಯ ಆಟಗಾರರ ಎನಿಸಿದ್ದರು.

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ, ಭಾನುವಾರ ಗುವಾಹಟಿಯಲ್ಲಿ ನಡೆಯಲಿದೆ. ತಿರುವನಂತಪುರಂನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ 8 ವಿಕೆಟ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು.

Join Whatsapp
Exit mobile version