ನವದೆಹಲಿ: ಎಲ್ಗರ್ ಪರಿಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ UAPA ಕಾಯ್ದೆ ಬಂಧಿತರಾಗಿ ಜೈಲಿನಲ್ಲಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಕರುಳಿನ ಕ್ಯಾನ್ಸರ್ ಇದೆ ಎಂಬುದು ಬಹಿರಂಗವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಜಸ್ಲೋಕ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ತಲೋಜಾ ಜೈಲು ಅಧೀಕ್ಷಕರಿಗೆ ಸುಪ್ರೀಮ್ ಕೋರ್ಟ್ ಸೂಚಿಸಿದೆ.
ವೈದ್ಯಕೀಯ ಚಿಕಿತ್ಸೆ ಪಡೆಯುವುದು ಪ್ರತಿಯೊಬ್ಬನ ಮೂಲಭೂತ ಹಕ್ಕು ಎಂದು ಹೇಳಿದ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠ, ಗೌತಮ್ ನವ್ಲಾಖಾ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ಸ್ನೇಹಿತ ಸಾಹ್ಬಾ ಹುಸೇನ್ ಮತ್ತು ಸಹೋದರಿಗೆ ಅವಕಾಶ ನೀಡಿದೆ.
ಗೌತಮ್ ನವ್ಲಾಖಾ ಅವರನ್ನು ತಪಾಸಣೆಯ ಕುರಿತು ಸುಪ್ರೀಮ್ ಕೋರ್ಟ್’ಗೆ ವರದಿ ಸಲ್ಲಿಸುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ತಲೋಜಾ ಜೈಲಿನಲ್ಲಿ ಸಾಕಷ್ಟು ಸಲ ವೈದ್ಯಕೀಯ ಮತ್ತು ಇತರ ಮೂಲಭೂತ ಸೌಕರ್ಯಗಳ ಕೊರತೆಯ ಜೊತೆಗೆ ಗೃಹಬಂಧನದ ಕುರಿತ ಅರ್ಜಿಯನ್ನು ವಜಾಗೊಳಿಸಿ ಬಾಂಬೆ ಹೈಕೋರ್ಟ್ ನೀಡಿದ ಏಪ್ರಿಲ್ 26 ರ ಆದೇಶದ ವಿರುದ್ಧ ನವ್ಲಾಖಾ ಅವರು ಸುಪ್ರೀಮ್ ಕೋರ್ಟ್’ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಗೌತಮ್ ನವ್ಲಾಖಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಯ ಕಪಿಲ್ ಸಿಬಲ್, ಆರೋಪಿ ಗೌತಮ್ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ತಿಳಿಸಿದರು.