ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ ಎಸ್ ಈಶ್ವರಪ್ಪ ಮನೆಗೆ ವಿವಿಧ ಸ್ವಾಮೀಜಿಗಳು ಭೇಟಿ ನೀಡಿ ಇಂದು ಧೈರ್ಯ ತುಂಬಿದ್ದಾರೆ. ಕಾಗಿನೆಲೆಯ ಪುರುಷೋತ್ತಮನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗದ ಈಶ್ವರನಂದಪುರಿ, ಸಹಿತ ಒಟ್ಟು 9 ಸ್ವಾಮೀಜಿಗಳು ಶಿವಮೊಗ್ಗದಲ್ಲಿರುವ ಮಾಜಿ ಸಚಿವ ಈಶ್ವರಪ್ಪ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಈಶ್ವರಪ್ಪಗೆ ಕರೆ ಮಾಡಿದ ಮಂತ್ರಾಲಯದ ಶ್ರೀಗಳು ನೀವು ಯಾವುದಕ್ಕೂ ವಿಚಲಿತರಾಗದಂತೆ ಧೈರ್ಯ ನೀಡಿ, ನೀವು ರಾಮ ಭಕ್ತರು. ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ, ಇನ್ನು ರಾಜೀನಾಮೆ ಕುರಿತಾಗಿ ಸ್ವಾಮೀಜಿಗಳೊಂದಿಗೆ ಮಾತನಾಡಿರುವ ಈಶ್ವರಪ್ಪ, ಪಕ್ಷದ ವರಿಷ್ಠರ ಜೊತೆ ಚರ್ಚಿಸಿಯೇ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ರಾಜೀನಾಮೆ ಕುರಿತಾಗಿ ಆತುರದ ತೀರ್ಮಾನ ಬೇಡ ಎಂಬ ಸೂಚನೆ ಬಂದ ಹಿನ್ನೆಲೆಯಲ್ಲಿ ರಾಜೀನಾಮೆಗೆ ತಡೆ ಮಾಡಿದ್ದೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುವಂತೆ ರಾಜ್ಯವ್ಯಾಪ್ತಿ ಒತ್ತಾಯ ಕೇಳಿಬಂದಿತ್ತು. ವಿವಿಧ ಪಕ್ಷಗಳು ಪ್ರತಿಭಟನೆ ನಡೆಸಿ ರಾಜೀನಾಮೆಗೆ ಆಗ್ರಹಿಸಿತ್ತು.