Home ಟಾಪ್ ಸುದ್ದಿಗಳು ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ; ಸಮಾಜವಾದಿ ಪಕ್ಷ 300 ಸ್ಥಾನ ಪಡೆಯಲಿದೆ: ಅಖಿಲೇಶ್ ಯಾದವ್

ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ; ಸಮಾಜವಾದಿ ಪಕ್ಷ 300 ಸ್ಥಾನ ಪಡೆಯಲಿದೆ: ಅಖಿಲೇಶ್ ಯಾದವ್

ಲಕ್ನೋ: ಸುದ್ದಿವಾಹಿನಿಗಳು ಪ್ರಕಟಿಸುತ್ತಿರುವ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಾರ್ಚ್ 10 ರಂದು ಪ್ರಕಟವಾಗಲಿರುವ ಫಲಿತಾಂಶದ ಬಳಿಕ ಆಡಳಿತರೂಢ ಬಿಜೆಪಿ ನಿರ್ನಾಮವಾಗಲಿದ್ದು, ಸಮಾಜವಾದಿ ಪಕ್ಷ 300 ಸ್ಥಾನಗಳನ್ನು ಪಡೆಯಲಿದೆ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಿಳಿಸಿದ್ದಾರೆ.

ಇತ್ತೀಚೆಗೆ ಪಂಜಾಬ್, ಉತ್ತರ ಪ್ರದೇಶ, ಮಣಿಪುರ, ಉತ್ತರಾಖಂಡ ಮತ್ತು ಗೋವಾ ಎಂಬ ಪಂಚರಾಜ್ಯಗಳಿಗೆ ನಡೆದ ಚುನಾವಣೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತಿವೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂಬ ವರದಿ ಪ್ರಕಟವಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿ ಪ್ರೇರಿತ ಮಾಧ್ಯಮಗಳು ಬೇಕಾದುದನ್ನು ಪ್ರಕಟಿಸಲಿ, ಇದರ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಈ ಚುನಾವಣೆಯಲ್ಲಿ ನಮ್ಮ ಪಕ್ಷ 300 ಸ್ಥಾನಗಳನ್ನು ಪಡೆಯಲಿದ್ದೇವೆ ಎಂದು ಟಿವಿ ವಾಹಿನಿಗಳಿಗೆ ನೀಡಿದ್ದ ಸಂದರ್ಭದಲ್ಲಿ ಭವಿಷ್ಯ ನುಡಿದಿದ್ದಾರೆ.

ರಾಜ್ಯ ಅಸೆಂಬ್ಲಿಗೆ ನಡೆದ ಅಂತಿಮ ಸುತ್ತಿನ ಮತದಾನದ ಫಲಿತಾಂಶವನ್ನು ಸೇರಿಸಿ ಸೋಮವಾರ ಸಂಜೆಯ ವೇಳೆ ಹೊಸ ಸಮೀಕ್ಷೆಯು ಸಮಾಜವಾದಿ ಪಕ್ಷಕ್ಕೆ ಪೂರಕವಾಗಿ ಪ್ರಕಟವಾಗಲಿದ್ದು, 300 ಸ್ಥಾನಗಳೊಂದಿಗೆ ಎಸ್ಪಿ ಸರ್ಕಾರ ರಚಿಸಲಿದೆ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.

Join Whatsapp
Exit mobile version