Home ಟಾಪ್ ಸುದ್ದಿಗಳು ಸುರತ್ಕಲ್: ಇಂದಿನಿಂದ ನವೆಂಬರ್ 3 ರವರೆಗೆ ಟೋಲ್ ಗೇಟ್ ಸುತ್ತ 144 ಸೆಕ್ಷನ್ ಜಾರಿ: ಮಂಗಳೂರು...

ಸುರತ್ಕಲ್: ಇಂದಿನಿಂದ ನವೆಂಬರ್ 3 ರವರೆಗೆ ಟೋಲ್ ಗೇಟ್ ಸುತ್ತ 144 ಸೆಕ್ಷನ್ ಜಾರಿ: ಮಂಗಳೂರು ಕಮಿಷನರ್

ಮಂಗಳೂರು: ಇಂದಿನಿಂದ (ಅಕ್ಟೋಬರ್ 28) ಸುರತ್ಕಲ್ ಟೋಲ್ ಗೇಟ್ ತೆರವಿಗಾಗಿ ಅನಿರ್ದಿಷ್ಟಾವಧಿ ಹಗಲು ರಾತ್ರಿ ಮುಷ್ಕರವನ್ನು ನಡೆಸುವುದಾಗಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಈ ಹಿಂದೆ ಕರೆನೀಡಿದ್ದು, ಆದರೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಸುರತ್ಕಲ್ ಠಾಣಾ ವ್ಯಾಪ್ತಿಯ ಟೋಲ್ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇಂದು ಬೆಳಿಗ್ಗೆ 6ರಿಂದ ನವಂಬರ್ 3ರ ಸಂಜೆ 6 ಗಂಟೆಯ ತನಕ ಸುರತ್ಕಲ್ ಪೊಲೀಸ್ ಠಾಣೆಯ ಟೋಲ್ ಗೇಟ್ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಟೋಲ್ ಗೇಟ್ ಗೆ ರಕ್ಷಣೆ ನೀಡುವ ದೃಷ್ಟಿಯಿಂದ ಈ ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಅ.25 ರಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ , ಟೋಲ್ ಗೇಟ್ ತೆರವಿಗೆ ಅಕ್ಟೋಬರ್ 18 ರಂದು ನಡೆದ ಹೋರಾಟಕ್ಕೆ ಜನರು ಬೆಂಬಲಿಸಿದ್ದಾರೆ. ಅಂದು ನಾವು ಟೋಲ್ ಗೇಟ್ ಮುತ್ತಿಗೆ ಹಾಕಿ ಕೆಲಹೊತ್ತು ಟೋಲ್ ಗೇಟ್ ಸಂಗ್ರಹವನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದರ ನಡುವೆ ಸಂಸದ ನಳಿನ್ ಕುಮಾರ್ ಕಟೀಲ್ 20 ದಿನಗಳಲ್ಲಿ ತೆರವು ಮಾಡುವ ಭರವಸೆ ನೀಡಿದ್ದಾರೆ. ಆದರೆ ಭರವಸೆ ಮೇಲೆ ನಂಬಿಕೆ ಇಲ್ಲ . ಈ ಕಾರಣಕ್ಕೆ ಅಕ್ಟೋಬರ್ 28ರಿಂದಲೇ ಟೋಲ್ ಗೇಟ್ ತೆರವಿಗಾಗಿ ಅನಿರ್ದಿಷ್ಟಾವಧಿ ಹಗಲು ರಾತ್ರಿ ಮುಷ್ಕರ ನಡೆಸುತ್ತೇವೆ ಎಂದು ಘೋಷಿಸಿತ್ತು.

ಆದರೆ ಇಂದು ಮಂಗಳೂರು ಕಮಿಷನರ್ ಟೋಲ್ ಸುತ್ತ ಸೆಕ್ಷನ್ ಜಾರಿಗೊಳಿಸಿದ್ದು, ಮುಷ್ಕರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ..

Join Whatsapp
Exit mobile version