Home ರಾಷ್ಟ್ರೀಯ ಗುಜರಾತ್ ಗಲಭೆ: ಮೋದಿಗೆ ಕ್ಲೀನ್ ಚಿಟ್ ಪ್ರಶ್ನಿಸಿ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ :...

ಗುಜರಾತ್ ಗಲಭೆ: ಮೋದಿಗೆ ಕ್ಲೀನ್ ಚಿಟ್ ಪ್ರಶ್ನಿಸಿ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ : ತೀರ್ಪು ಕಾಯ್ದಿರಿಸಿದ ಸುಪ್ರೀಂ

ನವದೆಹಲಿ: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ರಾಜ್ಯದ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಎಸ್‌ಐಟಿ ಕ್ಲೀನ್‌’ಚಿಟ್‌ ನೀಡಿರುವುದನ್ನು ಪ್ರಶ್ನಿಸಿ ಗಲಭೆಗೆ ಬಲಿಯಾದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಬುಧವಾರ ತೀರ್ಪು ಕಾಯ್ದಿರಿಸಿದೆ.

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿತು. ದೂರುದಾರರ ಪರವಾಗಿ ಹಾಜರಾದ ಕಪಿಲ್‌ ಸಿಬಲ್‌, ಎಸ್‌ಐಟಿ ತನಿಖೆಯು ಪಕ್ಷಪಾತದಿಂದ ಕೂಡಿದೆ. ಆರೋಪಿ ಪಟ್ಟಿಯಲ್ಲಿರುವ ಪೊಲೀಸರು, ಅಧಿಕಾರಿಗಳು ಹಾಗೂ ರಾಜಕಾರಣಿಗಳ ಮೊಬೈಲ್‌ ಸಂದೇಶಗಳನ್ನು SIT ವಶಪಡಿಸಿಕೊಂಡಿಲ್ಲ. ಆ ಕುರಿತು ತನಿಖೆ ನಡೆಸಿಲ್ಲ. ಕೆಲವೊಂದು ಗುಜರಾತಿ ಪತ್ರಿಕೆಗಳು ಕೋಮುದ್ವೇಷವನ್ನು ಹರಡಿವೆ. ಭಾವನಗರದ ಪತ್ರಿಕೆಯೊಂದು ಪ್ರತೀಕಾರ ತೀರಿಸಿಕೊಳ್ಳಲು ಹಿಂದೂಗಳು ಮತ್ತು ಹಿಂದೂ ಸಂಘಟನೆಗಳಿಗೆ ಕರೆ ನೀಡಿತ್ತು. ಆದರೆ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾದಿಸಿದರು.

ಎಸ್‌ಐಟಿ ಪರವಾಗಿ ಹಾಜರಾದ ವಕೀಲ ಮುಕುಲ್‌ ರೋಹಟಗಿ, ‘ಗುಜರಾತ್‌ ಹೈಕೋರ್ಟ್‌ ಮತ್ತು ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪನ್ನು ಅನುಮೋದಿಸಬೇಕು’ ಎಂದು ಕೋರಿದರು. 2009ರಲ್ಲಿ ಎಸ್‌ಐಟಿ ರಚಿಸಲಾಗಿದ್ದು, 2002ರ ಮೊಬೈಲ್‌ಗಳನ್ನು ಆಗಲೂ ವಶದಲ್ಲಿಟ್ಟುಕೊಳ್ಳಬೇಕು ಎಂದು ನಿರೀಕ್ಷಿಸುವುದು ಸಮಂಜಸವಲ್ಲ ಎಂದರು. ಗುಜರಾತ್ ಸರ್ಕಾರದ ಪರವಾಗಿ ವಾದ ಮಂಡಿಸಿದ ಎಸ್‌ಜಿ ತುಷಾರ್‌ ಮೆಹ್ತಾ, ಅರ್ಜಿದಾರರಾದ ಸಿಟಿಜನ್ಸ್‌ ಫಾರ್‌ ಜಸ್ಟೀಸ್‌ ಮತ್ತು ತೀಸ್ತಾ ಸೆಟಲ್ವಾಡ್‌ ಅವರ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳಿವೆ. ಗಲಭೆ ಸಂತ್ರಸ್ತರ ಕಲ್ಯಾಣಕ್ಕಾಗಿ ನೀಡಿದ ಹಣವನ್ನು ತೀಸ್ತಾ ದುರುಪಯೋಗಪಡಿಸಿಕೊಂಡಿದ್ದಾರೆ. ಝಾಕಿಯಾ ಜಾಫ್ರಿ ಅವರ ಹಿಂದಿನ ಶಕ್ತಿ ತೀಸ್ತಾ ಆಗಿದ್ದಾರೆ ಎಂದು ಆರೋಪಿಸಿದರು.

Join Whatsapp
Exit mobile version