ಲಿವ್-ಇನ್ ಸಂಬಂಧ ನೋಂದಣಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್: ಅಸಂಬದ್ಧ ಅರ್ಜಿ ಎಂದ ನ್ಯಾಯಾಲಯ

Prasthutha|

ನವದೆಹಲಿ: ಲಿವ್-ಇನ್ (ಸಹಜೀವನ) ಸಂಬಂಧ ನಡೆಸುತ್ತಿರುವವರ ನೋಂದಣಿಗಾಗಿ ಮತ್ತು ಅಂತಹವರಿಗೆ ಸಾಮಾಜಿಕ ಭದ್ರತೆ ನೀಡುವುದಕ್ಕಾಗಿ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಇದು ತಪ್ಪು ಗ್ರಹಿಕೆಯ ಅರ್ಜಿಯಾಗಿದೆ ಎಂದಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪಾರ್ದಿವಾಲಾ ಅವರಿದ್ದ ಪೀಠ ಅರ್ಜಿದಾರರ ಉದ್ದೇಶವನ್ನು ಕೂಡ ಪ್ರಶ್ನಿಸಿತು.

- Advertisement -


ʼನೀವು ಲಿವ್-ಇನ್ ಸಂಬಂಧದಲ್ಲಿರುವವರ ಸುರಕ್ಷತೆ ಬಯಸಲು ಹೊರಟಿರುವಿರೋ ಅಥವಾ ಅವರು ಸಹಜೀವನ ನಡೆಸಲು ಬಿಡಬಾರದು ಎಂದು ಹೇಳುತ್ತಿರುವಿರೋ? ಈ ಅರ್ಜಿಗೆ ದಂಡ ವಿಧಿಸಬೇಕು. ಇದು ಕೇವಲ ಅಸಂಬದ್ಧ ಅರ್ಜಿ” ಎಂದು ಅರ್ಜಿಯನ್ನು ವಜಾಗೊಳಿಸುವ ಮುನ್ನ ಸಿಜೆಐ ಅಸಮಾಧಾನ ವ್ಯಕ್ತಪಡಿಸಿದರು.
ಸಹಜೀವನ ನಡೆಸುತ್ತಿರುವವರಿಗೆ ಸಾಮಾಜಿಕ ಸಮಾನತೆ ಮತ್ತು ಭದ್ರತೆ ಒದಗಿಸಬೇಕು. ಲಿವ್‌-ಇನ್‌ ಸಂಬಂಧ ನೋಂದಾಯಿಸದಿದ್ದರೆ ಮುಕ್ತವಾಗಿ ಜೀವಿಸುವ ಹಕ್ಕು (ಸಂವಿಧಾನದ 19ನೇ ವಿಧಿ), ಜೀವ ರಕ್ಷಣೆಯ ಹಕ್ಕು (21ನೇ ವಿಧಿ) ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.


ಜೊತೆಗೆ, ಇಂತಹ ಸಂಬಂಧಗಳನ್ನು ನಿಯಂತ್ರಿಸಲು ಕಾನೂನು ರೂಪಿಸಬೇಕು ಹಾಗೂ ದೇಶದಲ್ಲಿ ಲಿವ್‌-ಇನ್ ಸಂಬಂಧದಲ್ಲಿರುವವರ ನಿಖರ ಸಂಖ್ಯೆ ಪತ್ತೆ ಮಾಡಲು ಕೇಂದ್ರ ಸರ್ಕಾರ ದತ್ತಕೋಶ ರಚಿಸುವ ತುರ್ತು ಅಗತ್ಯವಿದೆ. ಲಿವ್‌-ಇನ್‌ ಸಂಬಂಧಗಳ ನೋಂದಣಿ ಕಡ್ಡಾಯ ಮಾಡಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ನಿಯಮಗಳು ಮತ್ತು ಮಾರ್ಗಸೂಚಿಗಳು ಇಲ್ಲದೇ ಇರುವುದರಿಂದ ಲಿವ್‌-ಇನ್‌ ಸಂಬಂಧದಲ್ಲಿರುವವರ ನಡುವೆ ಅತ್ಯಾಚಾರ ಕೊಲೆಯಂತಹ ಪ್ರಮುಖ ಅಪರಾಧಗಳು ಹೆಚ್ಚಿವೆ ಎಂದು ಉಲ್ಲೇಖಿಸಲಾಗಿತ್ತು.
(ಕೃಪೆ: ಬಾರ್ & ಬೆಂಚ್)

Join Whatsapp
Exit mobile version