ನವದೆಹಲಿ: 2018ರ ಡಿಸೆಂಬರ್ 12ರಂದು ನಡೆದ ಕೊಲಿಜಿಯಂ ಸಭೆಯ ಪೂರ್ಣ ಮಾಹಿತಿ ನೀಡುವಂತೆ ಆರ್’ಟಿಐ ಮಾಹಿತಿ ಹಕ್ಕಿನಡಿ ಕೇಳಿದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾ ಮಾಡಿದೆ.
ಆ ಸಭೆಯಲ್ಲಿ ಹಾಜರಾಗಿ ಚರ್ಚೆ ನಡೆಸಿದ ನ್ಯಾಯಾಧೀಶರಿಗೆ ಮಾತ್ರ ಸೀಮಿತವಾದ ಮಾಹಿತಿಯದು ಎಂದು ಜಸ್ಟಿಸ್’ಗಳಾದ ಎಂ. ಆರ್. ಶಾ ಮತ್ತು ಸಿ. ಟಿ. ರವಿಕುಮಾರ್ ಅವರಿದ್ದ ಪೀಠವು ಹೇಳಿದೆ. ಅವರೆಲ್ಲರೂ ಸಹಿ ಹಾಕಿ ಅಂತಿಮ ಎಂದು ತಿಳಿಸದ ಹೊರತು ಬೇರೆ ಯಾರೂ ಅದನ್ನು ಬಹಿರಂಗಪಡಿಸಲಾಗದು ಎಂದೂ ಅವರು ಹೇಳಿದರು.
“ಏನು ಚರ್ಚೆಯಾಯಿತು, ಅದೆಲ್ಲ ಸಾರ್ವಜನಿಕರಿಗೆ ತಿಳಿಯಬೇಕಾದ ವಿಷಯವಲ್ಲ. ಅಂತಿಮವಾಗಿ ಅವರೆಲ್ಲ ಸೇರಿ ಕೈಗೊಂಡ ತೀರ್ಮಾನ ಇಲ್ಲವೇ ಅಂತಿಮಗೊಳಿಸಿದ ಹೆಸರುಗಳು ಮಾತ್ರವೇ ಸಾರ್ವಜನಿಕರಿಗೆ ಲಭ್ಯ” ಎಂದೂ ಪೀಠವು ಹೇಳಿತು.
ಆರ್’ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ದಿಲ್ಲಿ ಹೈಕೋರ್ಟಿಗೆ ಕೊಲಿಜಿಯಂ ಚರ್ಚೆಯ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದು, ಅದನ್ನು ಹೈಕೋರ್ಟ್ ವಜಾ ಮಾಡಿದೆ, ಆದ್ದರಿಂದ ನೀವು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
2018ರ ಸುಪ್ರೀಂಕೋರ್ಟ್ ಕೊಲಿಜಿಯಂನ ಭಾಗವಾಗಿದ್ದ ಜಸ್ಟಿಸ್ ಎಂ. ಬಿ. ಲೋಕೂರ್ ಅವರು ಅಂದಿನ ಚರ್ಚೆಯನ್ನು ಸುಪ್ರೀಂ ಕೋರ್ಟಿನ ವೆಬ್’ಸೈಟಿಗೆ ಅಪ್ ಲೋಡ್ ಮಾಡುವುದಾಗಿ ಹೇಳಿದ್ದರು ಎಂದು ಅಂಜಲಿ ಅವರ ಪರ ಹಾಜರಾದ ವಕೀಲ ಪ್ರಶಾಂತ ಭೂಷಣ್ ಹೇಳಿದರು.
2018ರ ಡಿಸೆಂಬರ್ 12ರ ಕೊಲಿಜಿಯಂ ಸಭೆಯು ಅಂದಿನ ಸಿಜೆಐ ರಂಜನ್ ಗೊಗೋಯಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಸ್ಟಿಸ್’ಗಳಾದ ಲೋಕೂರ್, ಎ.ಕೆ. ಸಿಕ್ರಿ, ಎಸ್.ಎ. ಬೊಬ್ಡೆ, ಎನ್. ವಿ. ರಮಣ (ಈಗ ಎಲ್ಲರೂ ನಿವೃತ್ತರು) ಆ ಸಭೆಯ ಭಾಗವಾಗಿದ್ದರು. ಆಗ ಕೆಲವು ಜಡ್ಜ್’ಗಳನ್ನು ಸುಪ್ರೀಂಕೋರ್ಟ್’ಗೆ ನೇಮಿಸುವ ಹಾಗೂ ಕೆಲವು ಹೈಕೋರ್ಟ್ ಜಡ್ಜ್’ಗಳ ವರ್ಗಾವಣೆಯ ತೀರ್ಮಾನ ಆಯಿತು. ಆದರೆ ಅದನ್ನು ಸುಪ್ರೀಂಕೋರ್ಟ್ ವೆಬ್’ಸೈಟಿಗೆ ಅಪ್’ಲೋಡ್ ಮಾಡಿಲ್ಲ.
ಈ ರೀತಿ ಆ ಚರ್ಚಾ ಸಭೆಯ ಬಗ್ಗೆ ವಿವರಿಸಿದ ವಕೀಲ ಭೂಷಣ್ ಅವರು ನಮ್ಮ ಕಕ್ಷಿದಾರರು ಆ ಕೊಲಿಜಿಯಂ ಚರ್ಚೆಯ ಮೂರು ಮುಖ್ಯ ಮಾಹಿತಿಯನ್ನು ಮಾತ್ರ ಕೇಳುತ್ತಿದ್ದಾರೆ ಎಂದು ಹೇಳಿದರು.
“ಇಲ್ಲಿನ ಮುಖ್ಯ ಪ್ರಶ್ನೆಯೆಂದರೆ ಕೊಲಿಜಿಯಂ ಚರ್ಚೆಯು ಮಾಹಿತಿ ಹಕ್ಕುಗಳಡಿಗೆ ಬರುತ್ತದೆಯೇ ಎನ್ನುವುದಾಗಿದೆ. ಅನಂತರ 2019ರ ಜನವರಿ 10ರಂದು ಕೊಲಿಜಿಯಂ ಸಭೆ ಸೇರಿ ಅವನ್ನೆಲ್ಲ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಂಡಿತ್ತು” ಎಂದು ಬೆಂಚ್ ಹೇಳಿತು.