ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಸಾಮಾಜಿಕ ಹೋರಾಟಗಾರ್ತಿ, ವಕೀಲೆ ಸುಧಾ ಭಾರದ್ವಾಜ್ ಅವರಿಗೆ ಬಾಂಬೆ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ( NIA ) ಸಲ್ಲಿಸಿದ್ದ ಅರ್ಜಿಯನ್ನು ಸುರ್ಪೀಮ್ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರಿಗೆ ಬಾಂಬೆ ಹೈಕೋರ್ಟ್, ಡೀಫಾಲ್ಟ್ ಜಾಮೀನನ್ನು ತಪ್ಪಾಗಿ ಮಂಜೂರು ಮಾಡಿದೆ ಎಂದು ವಾದಿಸಿದ NIA ಪರ ವಕೀಲರಾದ ಹೆಚ್ಚುವರಿ ಸಾಲಿಟರ್ ಜನರಲ್ ಅಮನ್ ಲೇಖಿ, ಡೀಫಾಲ್ಟ್ ಜಾಮೀನು ನೀಡುವಾಗ UAPA ಕಾಯ್ದೆ, ಐಪಿಸಿ ಸೆಕ್ಷನ್ ಗಳನ್ನು ಹೈಕೋರ್ಟ್ ಪರಿಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ಸುಧಾ ಅವರ ಜಾಮೀನನ್ನು ರದ್ದುಗೊಳಿಸುವಂತೆ ನ್ಯಾಯಾಲಯದ ಪೀಠಕ್ಕೆ ಮನವಿ ಮಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಸುಪ್ರೀಮ್ ಕೋರ್ಟ್ ನ ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ರವೀಂದ್ರ ಭಟ್ ಹಾಗೂ ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠ, ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಯಾವುದೇ ಅಂಶಗಳಿಲ್ಲ ಎಂದು NIA ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.
2018 ರಿಂದ ಜೈಲಿನಲ್ಲಿರುವ ಸುಧಾ ಭಾರದ್ವಾಜ್ ಅವರಿಗೆ ಬಾಂಬೆ ಹೈಕೋರ್ಟ್ ಡೀಫಾಲ್ಟ್ ಜಾಮೀನು ಮಂಜೂರು ಮಾಡಿತ್ತು.