Home ಕರಾವಳಿ ಮಂಗಳೂರು | ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ತನಿಖಾಧಿಕಾರಿ ಬದಲಾವಣೆಗೆ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನಾ ರವಿ...

ಮಂಗಳೂರು | ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ತನಿಖಾಧಿಕಾರಿ ಬದಲಾವಣೆಗೆ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನಾ ರವಿ ಒತ್ತಾಯ

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿರುವ ಆರೋಪಿ ವಕೀಲ ರಾಜೇಶ್ ಭಟ್ ವಿರುದ್ಧ ಎಫ್ ಐಆರ್ ದಾಖಲಾಗಿ ಇಂದಿಗೆ 50 ದಿನಗಳು ಕಳೆದಿವೆ. ಆದರೆ ಇದುವರೆಗೆ ಪ್ರಮುಖ ಆರೋಪಿ ಭಟ್ ಪೊಲೀಸರಿಗೆ ಸಿಗದಿರುವುದು ಅನೇಕ ಸಂದೇಹಗಳಿಗೆ ಕಾರಣವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನಾ ರವಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಸಂತ್ರಸ್ತೆಗೆ ತನಿಖಾಧಿಕಾರಿಯಿಂದ ಕಿರುಕುಳ ನೀಡಲಾಗುತ್ತಿದೆ. ಪೊಲೀಸ್ ಆಯುಕ್ತರು ನಾಲ್ಕು ತಂಡ ರಚಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ ತನಿಖಾಧಿಕಾರಿ ಸಂತ್ರಸ್ತೆಯನ್ನು ಕರೆದು ಹೋರಾಟ ಯಾಕೆ ಬೇಕು? ಆರೋಪಿಯ ಪತ್ನಿ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಹೇಳಿ ಆಕೆಯ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಕೂಡಲೇ ತನಿಖಾಧಿಕಾರಿಯನ್ನು  ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಆರೋಪಿ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದೇವೆ ಎಂದು ಪೊಲೀಸರು ಹೇಳುತ್ತಾರೆ. ಆದರೆ ರೈಲು ನಿಲ್ದಾಣದಲ್ಲಿ ಕೇಳಿದರೆ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳುತ್ತಾರೆ. ಮಂಗಳೂರು ಪೊಲೀಸ್ ಆಯುಕ್ತರ ಮೇಲೆ ಯಾವುದೇ ವೈಯಕ್ತಿಕ ದ್ವೇಷ ತಮಗಿಲ್ಲ. ಅವರ ಬಗ್ಗೆ ಗೌರವ ಇದೆ. ಆದರೆ ಈ ರೀತಿ ಮಾಡುದರಿಂದ ಬೇಸರ ಆಗಿದೆ. ಆರೋಪಿ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾವು ಪ್ರತಿಭಟನೆ ನಡೆಸಲು ಅನುಮತಿ ಕೇಳಿದರೆ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಹೇಳುತ್ತಾರೆ. ಆದರೆ ಉಳಿದವರು ಎಷ್ಟು ಬೇಕಾದರೂ ಪ್ರತಿಭಟನೆ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

Join Whatsapp
Exit mobile version