Home ಟಾಪ್ ಸುದ್ದಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ನೋಂದಣಿಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್

ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ನೋಂದಣಿಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್

ನವದೆಹಲಿ:  ದೈಹಿಕ ಉಪಸ್ಥಿತಿ ಇಲ್ಲದೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ನೋಂದಣಿ ಮಾಡಲು ವಿಶೇಷ ವಿವಾಹ ಕಾಯ್ದೆಯಡಿ ಅನುಮತಿ ನೀಡಿ ಸುಪ್ರೀಂಕೋರ್ಟ್ ಆದೇಶಿಸಿದೆ. ಕಾನೂನು, ತಂತ್ರಜ್ಞಾನ ಬೆಳೆಯುತ್ತಿದೆ. ಅವುಗಳಿಗೆ ಸರಿಸಮಾನವಾಗಿ ನಾವು ನಡೆಯಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಾಧೀಶರಾದ ಇಂದಿರಾ ಬ್ಯಾನರ್ಜಿ ಮತ್ತು ವಿ.ರಾಮಸುಬ್ರಮಣ್ಯನ್ ಅವರಿದ್ದ ದ್ವಿಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿತು. ವಿಶೇಷ ಕಾನೂನಿನ ಅಡಿಯಲ್ಲಿ, ಓರ್ವ ದಂಪತಿಗೆ ದೂರದಲ್ಲಿದ್ದುಕೊಂಡು ಸಾಕ್ಷ್ಯ ಹೇಳಲು ಅನುವು ಮಾಡಿಕೊಟ್ಟ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಹರಿಯಾಣ ಸರ್ಕಾರ ಈ ಹಿಂದೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್ ಈ ತೀರ್ಪು ನೀಡಿದೆ.

ನೋಂದಣಿ ವಿಭಾಗ ಇರುವುದು ಜನರ ಅನುಕೂಲಕ್ಕಾಗಿಯೇ ಹೊರತು ಅಡಚಣೆ ಅಥವಾ ಅಡೆತಡೆಗಳನ್ನು ಸೃಷ್ಟಿಸಲು ಅಲ್ಲ” ಎಂದು ಸ್ಪಷ್ಟವಾಗಿ ಸುಪ್ರೀಂಕೋರ್ಟ್ ಹೇಳಿದೆ. ಇನ್ನು ಹರಿಯಾಣ ಸರ್ಕಾರಕ್ಕೆ 45 ದಿನಗಳ ಒಳಗೆ ಹೈಕೋರ್ಟ್ ಆದೇಶವನ್ನು ಪಾಲಿಸುವಂತೆ ನಿರ್ದೇಶನ ನೀಡಿದೆ.

ಈ ಆದೇಶಕ್ಕೆ ಕಾರಣವಾದ ಪ್ರಕರಣ

ಪತಿ ಯುಕೆಯಲ್ಲಿ ಮತ್ತು ಪತ್ನಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರು 2019ರ ಡಿಸೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಮದುವೆಯಾಗಿ ಆ ಬಳಿಕ ತಮ್ಮ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ವಿವಾಹ ನೋಂದಣಿ ಅಧಿಕಾರಿಯು ಪತಿ-ಪತ್ನಿ 2020ರ ಏಪ್ರಿಲ್ 3ರಂದು ಕಚೇರಿಗೆ ಆಗಮಿಸುವಂತೆ ತಿಳಿಸಿದ್ದಾರೆ. ಆದರೆ ಕೋವಿಡ್ -19 ಕಾರಣದಿಂದ ಎಲ್ಲಾ ವಿಮಾನಗಳು ರದ್ದಾಗಿದ್ದು, ದಂಪತಿಗೆ ಆಗಮಿಸಲು ಸಾಧ್ಯವಾಗಿಲ್ಲ. ಹೀಗಾಗಿ 2020ರ ಆಗಸ್ಟ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹ ನೋಂದಾವಣೆ ಪ್ರಕ್ರಿಯೆ ನಡೆಸಿಕೊಡುವಂತೆ ಆ ದಂಪತಿ ಮನವಿ ಸಲ್ಲಿಸಿದ್ದಾರೆ. ಆದರೆ ವಿವಾಹ ನೋಂದಾವಣಿ ಅಧಿಕಾರಿ ಮನವಿಯನ್ನು ನಿರಾಕರಿಸಿದ್ದರು.

ಆ ಬಳಿಕ ದಂಪತಿ ಆದೇಶ ಪ್ರಶ್ನಿಸಿ ದ್ವಿಸದಸ್ಯ ಪೀಠದ ಮೆಟ್ಟಿಲೇರಿದರು. ಆಗ ನ್ಯಾಯಪೀಠವು “ಪತ್ನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ, ಪತಿ ಇಬ್ಬರು ಸಾಕ್ಷಿಗಳ ಜೊತೆ ಹಾಜರಾದರೆ ಕಾನೂನಿನ ಉಲ್ಲಂಘನೆಯಾಗುವುದಿಲ್ಲ” ಎಂದು ತೀರ್ಪು ನೀಡಿತು. ಆದರೆ ಮದುವೆ ನೋಂದಾವಣೆಗೆ ದಂಪತಿಯ ಸಹಿಯ ಅಗತ್ಯವಿದೆ ಎಂದು ಹೇಳಿ ಹರಿಯಾಣ ಸರ್ಕಾರವು ಆ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತು. ಆದರೆ ಸುಪ್ರೀಂ ಪೀಠವು ದಂಪತಿಗೆ ಅನುಮತಿ ನೀಡಿ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿದೆ.

Join Whatsapp
Exit mobile version