Home ಟಾಪ್ ಸುದ್ದಿಗಳು ವಿರೋಧ ಪಕ್ಷಗಳ ಐಕ್ಯತಾ ಸಭೆಗೆ ವೇದಿಕೆ ಸಜ್ಜು; ಮುಂದಿನ ವಾರ ದೆಹಲಿಯಲ್ಲಿ ಸಭೆ

ವಿರೋಧ ಪಕ್ಷಗಳ ಐಕ್ಯತಾ ಸಭೆಗೆ ವೇದಿಕೆ ಸಜ್ಜು; ಮುಂದಿನ ವಾರ ದೆಹಲಿಯಲ್ಲಿ ಸಭೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಿರೋಧ ಪಕ್ಷದ ಐಕ್ಯತಾ ಸಭೆಗೆ ವೇದಿಕೆಯನ್ನು ಸಜ್ಜುಗೊಳಿಸಿದ್ದಾರೆ.

ಪ್ರಸಕ್ತ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ವಿಸ್ತೃತ ಚರ್ಚೆ ನಡೆಸುವ ನಿಟ್ಟಿನಲ್ಲಿ ಈ ಸಭೆ ಮಹತ್ವ ಪಡೆದಿದೆಯೆಂದು ಹೇಳಲಾಗುತ್ತಿದೆ. ಮುಂದಿನವಾರ ನಡೆಯುವ ಸಭೆಯಲ್ಲಿ ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ, ಇತರ ಬಿಜೆಪಿಯೇತರ ಮುಖ್ಯಮಂತ್ರಿಗಳು, ಸಂಸತ್ತಿನ ವಿರೋಧ ಪಕ್ಷದ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಐಕ್ಯತೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಸಭೆಯನ್ನು ವ್ಯವಸ್ಥೆಗೊಳಿಸಲಾಗಿದೆಯೆಂದು ಸೋನಿಯಾ ತಿಳಿಸಿದರು.

ಆಗಸ್ಟ್ 20 ಕ್ಕೆ ಈ ಸಭೆ ದೆಹಲಿಯಲ್ಲಿ ನಿಗದಿಯಾಗಿದ್ದು, ಬಂಗಾಳ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳಲ್ಲದೆ ಎನ್.ಸಿ.ಪಿ ನಾಯಕ ಶರದ್ ಪವಾರ್, ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ ಸ್ಟಾಲಿನ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಈ ಸಭೆಗೆ ಆಹ್ವಾನಿಸಲಾಗಿದೆ. ಮಾತ್ರವಲ್ಲದೆ ಸಭೆಯ ಕೊನೆಯಲ್ಲಿ ನೆರೆದ ಗಣ್ಯರಿಗೆ ಬೃಹತ್ ಔತಣಕೂಟವನ್ನು ಏರ್ಪಡಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿದೆ.

ಇತ್ತೀಚೆಗೆ ನಡೆದ ಮಳೆಗಾಲದ ಅಧಿವೇಶನದಲ್ಲಿ 15 ಕ್ಕೂ ಮಿಕ್ಕಿದ ವಿರೋಧಪಕ್ಷಗಳು ಐಕ್ಯತೆಯನ್ನು ಪ್ರದರ್ಶಿಸಿ ಸಂಸತ್ತಿನಲ್ಲಿ ಪೆಗಾಸೆಸ್ ಬೇಹುಗಾರಿಕೆ, ಇಂಧನ ಬೆಲೆಯೇರಿಕೆ, ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಬೃಹತ್ ಮಟ್ಟದಲ್ಲಿ ಪ್ರತಿಭಟಿಸುವ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದವು.

ಮುಂದಿನ ಪಾರ್ಲಿಮೆಂಟ್ ಚುನಾವಣೆಯು 2024 ರಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ದೇಶದ ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಐಕ್ಯತೆ ಪ್ರದರ್ಶಿಸುವುದು ಅನಿವಾರ್ಯವೆಂದು ಒಮರ್ ಅಬ್ದುಲ್ಲಾ ಅವರು ಇತ್ತೀಚೆಗೆ ನಡೆದ ಸಭೆಯಲ್ಲಿ ತಿಳಿಸಿದರು. ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಕಪಿಲ್ ಸಿಬಲ್, ಶರದ್ ಪವಾರ್, ಲಾಲು ಪ್ರಸಾದ್ ಯಾದವ್, ಅಖಿಲೇಶ್ ಯಾದವ್, ಸಂಜಯ್ ರಾವುತ್, ಡೆರೆಕ್ ಒಬ್ರೈನ್, ಒಮರ್ ಅಬ್ದುಲ್ಲಾ, ನವೀನ್ ಪಟ್ನಾಯಕ್ ಅವರು ಭಾಗವಹಿಸಿದ್ದರು. ಸೋನಿಯಾ ಗಾಂಧಿ ಅವರು ಈ ಸಭೆಗೆ ಗೈರು ಹಾಜರಿದ್ದರು.

ಸಭೆಯಲ್ಲಿ ಮಾತನಾಡಿದ ಅಕಾಲಿದಳದ ನರೇಶ್ ಗುಜ್ರಾಲ್ ಅವರು ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂದದ ಹಿಡಿತದಿಂದ ಹೊರಬರದಿದ್ದರೆ ಐಕ್ಯತೆಗೆ ಅರ್ಥವಿಲ್ಲವೆಂದು ತಿಳಿಸಿದರು. ಈ ಎಲ್ಲಾ ಅಂಶಗಳನ್ನು ಅವಲೋಕಿಸಿ ಸೋನಿಯಾ ಗಾಂಧಿ ಆಯೋಜಿಸುತ್ತಿರುವ ಸಭೆ ಭಾರೀ ಮಹತ್ವ ಪಡೆದಿದೆ ಹೇಳಲಾಗುತ್ತಿದೆ.

Join Whatsapp
Exit mobile version