Home ಟಾಪ್ ಸುದ್ದಿಗಳು ಹಿಜಾಬ್ ಪ್ರಕರಣ: ವಿಚಾರಣೆ ಬುಧವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

ಹಿಜಾಬ್ ಪ್ರಕರಣ: ವಿಚಾರಣೆ ಬುಧವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬುಧವಾರಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಒಂದು ಬ್ಯಾಚ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆಗಸ್ಟ್ 29 ರಂದು ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

ಸೆಪ್ಟೆಂಬರ್ 5ರಂದು ಕರ್ನಾಟಕ ಹೈಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಮತ್ತು ತಡೆಯಾಜ್ಞೆ ಕೋರಿದ ವಿಷಯವನ್ನು ಆಲಿಸುವುದಾಗಿ ನ್ಯಾಯಾಲಯ ಹೇಳಿತ್ತು.

ಶಾಲಾ-ಕಾಲೇಜುಗಳ ಏಕರೂಪದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ನಿರ್ದೇಶಿಸಿರುವ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿವಿಧ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ವಾದ-ವಿವಾದ ಹೇಗಿತ್ತು ಗೊತ್ತಾ?

ನ್ಯಾ. ಗುಪ್ತ – ಸರ್ಕಾರವು ಸಮವಸ್ತ್ರ ಸಂಹಿತೆಗೆ ನಿರ್ಬಂಧವನ್ನು ವಿಧಿಸಿಲ್ಲ ಎಂದಾದ ಮೇಲೆ ಶಿಕ್ಷಣ ಸಂಸ್ಥೆಗಳು ನಿಯಮಗಳನ್ನು ರೂಪಿಸಬಾರದು ಎಂದು ಹೇಗೆ ಹೇಳುತ್ತೀರಿ?. ವಿದ್ಯಾರ್ಥಿನಿಯರು ಮಿನಿ, ಮಿಡಿ ಧರಿಸಿ ಬರಬಹುದೇ?

ಹೆಗ್ಡೆ: ಇಡೀ ಪ್ರಕರಣವನ್ನು ಶಾಸನಾತ್ಮಕ ಆಧಾರಗಳ ಹಿನ್ನೆಲೆಯಲ್ಲಿ ನೋಡಬೇಕೇ ಹೋರತು ಸಾಂವಿಧಾನಿಕ ಪ್ರಶ್ನೆಗಳ ಹಿನ್ನೆಲೆಯಲ್ಲಿ ಪರಿಗಣಿಸಬಾರದು. ಸೂಚಿಸಲಾದ ಸಮವಸ್ತ್ರವನ್ನು ಧರಿಸಿಲ್ಲ ಎಂದಾಕ್ಷಣವೇ ಯಾರನ್ನಾದರೂ ಶಿಕ್ಷಣದ ಲಭ್ಯತೆಯಿಂದ ವಂಚಿತರನ್ನಾಗಿಸಲು ಸಾಧ್ಯವೇ?

ಹೆಗ್ಡೆ: ಮೂಲಭೂತ ಹಕ್ಕುಗಳನ್ನು ಮೀರಿ ಕಾರ್ಯಕಾರಿ ಅಧಿಕಾರವು ಇರಲಾಗದು.

ಹೆಗ್ಡೆ: ಶಿಕ್ಷಣ ಕಾಯಿದೆಗೆ ವಿರುದ್ಧವಾಗಿ ಸರ್ಕಾರದ ಆದೇಶವು ಇರಲಾಗದು. ಅಂತಹ ಅದೇಶವನ್ನು ಯಾವುದೇ ನಿರ್ದೇಶಗಳನ್ನು ಬಳಸಲಾಗದು. ನಿಯಮಾವಳಿ 11ಎ ಅಡಿ ಸೂಚಿಸಲಾದ ಸಮವಸ್ತ್ರವು ಕಾಯಿದೆಗೆ ಪೂರಕವಾಗಿ ಇರಬೇಕು.

ಹೆಗ್ಡೆ: ಶಾಸಕಾಂಗವು ಸಮವಸ್ತ್ರದ ಬಗ್ಗೆ ಏನನ್ನು ನಿರ್ದಿಷ್ಟವಾಗಿ ಹೇಳಿಲ್ಲ ಎಂದ ಮೇಲೆ ಸರ್ಕಾರಿ ಆದೇಶವು ಹೊಸ ವೈಕಲ್ಯಗಳನ್ನು ಸೃಷ್ಟಿಸಲಾಗದು, ಶಾಲಾ ಕಾಲೇಜುಗಳಿಗೆ ಹಾಜರಾಗುವ ಅಧಿಕಾರವನ್ನು ಕಸಿಯಲಾಗದು.

ನ್ಯಾ. ಗುಪ್ತ: ಏಕರೂಪದ ಸಮವಸ್ತ್ರವನ್ನು ಏಕರೂಪವಾಗಿಸುವ ಯಾವುದೇ ನಿಯಮಗಳನ್ನು ಮಾಡಲಾಗದು ಎನ್ನುವುದು ನಿಮ್ಮ ವಾದವೇ?

ನ್ಯಾ. ಧುಲಿಯಾ: ಏಕರೂಪ ಸಮವಸ್ತ್ರದ ಏಕರೂಪತೆ!

(ಇಬ್ಬರು ನ್ಯಾಯಮೂರ್ತಿಗಳೂ ನಗುತ್ತಾರೆ)

ನ್ಯಾ. ಗುಪ್ತ: ನಿಮ್ಮ ವಾದ ಗೊತ್ತಾಯಿತು. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಶಾಸನದಲ್ಲಿ ಏನನ್ನೂ ಹೇಳಿಲ್ಲ.

ನ್ಯಾ. ಧುಲಿಯಾ: ಅದರೆ, ಸಮವಸ್ತ್ರವನ್ನು ಹೊಂದುವ ಅಧಿಕಾರವನ್ನು ನೀವು ಪ್ರಶ್ನಿಸಲಾಗದು ಅಲ್ಲವೇ?

ಹೆಗ್ಡೆ: ದಕ್ಷಿಣ ಭಾರತದಲ್ಲಿ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಬೇಕು.

ನ್ಯಾ. ಗುಪ್ತ: ನಿಮ್ಮಂಥ ವಿದ್ಯಾರ್ಥಿಗಳಿಂದಾಗಿ ಬಹುಶಃ ಅವರಿಗೆ ಅಶಿಸ್ತು ಬೇಕಿಲ್ಲ ಅನಿಸುತ್ತದೆ (ನಗು).

ಹೆಗ್ಡೆ: ನಾನು ಅತ್ಯಂತ ಕೆಟ್ಟ ವಿದ್ಯಾರ್ಥಿ. ಇಲ್ಲ ಎಲ್ಲಾ ಕಾಲೇಜುಗಳಲ್ಲೂ ಸಮವಸ್ತ್ರ ಇದೆ.

ನ್ಯಾ. ಧುಲಿಯಾ: ಎಂಜಿನಿಯರಿಂಗ್‌ ಕಾಲೇಜಾಗಿರಬೇಕು?

ಹೆಗ್ಡೆ: ಇಲ್ಲ.

ಪೀಠ: ಇಲ್ಲಿ ಧಾರ್ಮಿಕ ಆಚರಣೆ ಎಲ್ಲಿದೆ?

ಹೆಗ್ಡೆ: ಕುರ್ ಆನ್‌ ವರ್ಸ್‌ಗಳು ಇವೆ.

ನ್ಯಾ. ಧುಲಿಯಾ: ಇದು ನಿರ್ದಿಷ್ಟ ಉಲ್ಲೇಖದಡಿ ಬರುವುದಿಲ್ಲ.

ನ್ಯಾ. ಗುಪ್ತ: ನೀವು ಬಹುತೇಕ ವಾದ ಪೂರ್ಣಗೊಳಿಸಿದ್ದೀರಿ. ಸರ್ಕಾರ ಪ್ರತಿಕ್ರಿಯಿಸಲಿ ಬಿಡಿ.

ನ್ಯಾ. ಗುಪ್ತ: ನಿಮಗೆ ಧಾರ್ಮಿಕ ಹಕ್ಕು ಇರಬಹುದು. ಸಮವಸ್ತ್ರ ಕಡ್ಡಾಯ ಇರುವ ಕಡೆ ನೀವು ಧಾರ್ಮಿಕ ಹಕ್ಕನ್ನು ಶಿಕ್ಷಣ ಸಂಸ್ಥೆಯಲ್ಲಿ ಚಲಾಯಿಸಬಹುದೇ? ಹಿಜಾಬ್‌ ಅಥವಾ ಶಿರವಸ್ತ್ರ ಹಾಕಿಕೊಳ್ಳಲು ಅರ್ಹರಾಗಿರಬಹುದು. ಸಮವಸ್ತ್ರ ಕಡ್ಡಾಯ ಮಾಡಿರುವ ಶಿಕ್ಷಣ ಸಂಸ್ಥೆಯಲ್ಲಿ ನೀವು ಆ ಹಕ್ಕನ್ನು ಚಲಾಯಿಸಬಹುದೇ?

ನ್ಯಾ. ಗುಪ್ತ: ಶಿಕ್ಷಣ ಹಕ್ಕನ್ನು ಅವರು ನಿರಾಕರಿಸುತ್ತಿಲ್ಲ. ಸಮವಸ್ತ್ರದಲ್ಲಿ ಬನ್ನಿ ಎಂದು ಸರ್ಕಾರ ಹೇಳುತ್ತಿದೆ.

ಹೆಗ್ಡೆ: ಸಮವಸ್ತ್ರವಾಗಿ ಚುನ್ನಿ ಇದೆ.

ನ್ಯಾ. ಗುಪ್ತ: ಭುಜ ಮುಚ್ಚಲು ಚುನ್ನಿ ಬಳಸುತ್ತಾರೆ. ಚುನ್ನಿಯನ್ನು ಹಿಜಾಬ್‌ ಗೆ ಹೋಲಿಕೆ ಮಾಡಬೇಡಿ. ಗುರುದ್ವಾರದಲ್ಲಿ ತಲೆಭಾಗ ಮುಚ್ಚಿಕೊಳ್ಳಲು ಸಿಖ್‌ ಮಹಿಳೆಯರು ಚುನ್ನಿ ಬಳಸುತ್ತಾರೆ.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಎಂ ನಟರಾಜ್: ಶೈಕ್ಷಣಿಕ ಸಂಸ್ಥೆಯಲ್ಲಿ ಶಿಸ್ತು ಕಾಪಾಡುವ ವಿಚಾರ ನಮ್ಮ ಮುಂದಿದೆ. ಆದರೆ, ಅದನ್ನು ಪಾಲಿಸಲು ಅವರಿಗೆ ಇಷ್ಟವಿಲ್ಲ.

ನ್ಯಾ. ಗುಪ್ತ: ಸಂಸ್ಥೆಯ ಶಿಸ್ತನ್ನು ಹಿಜಾಬ್‌ ಹೇಗೆ ಉಲ್ಲಂಘಿಸುತ್ತದೆ?

ಎಎಸ್‌ ಜಿ: ಧಾರ್ಮಿಕ ಹಕ್ಕನ್ನು ಉಲ್ಲೇಖಿಸಿ ಅವರು ಶಾಲೆಯ ಸಮವಸ್ತ್ರ ಸಂಹಿತೆ ಉಲ್ಲಂಘಿಸಲಾಗದು.

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ: ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿದ್ದರಿಂದ, ಯುವಕರು ಭಾಗ್ವಾ ಹಾಕಿಕೊಂಡು ಬಂದಿದ್ದರು. ಇದು ಶಿಕ್ಷಣ ಸಂಸ್ಥೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿತ್ತು. ಇದನ್ನು ಉಲ್ಲೇಖಿಸಿ ಶಾಲಾ ಆಡಳಿತಗಳು ಸರ್ಕಾರಕ್ಕೆ ಪತ್ರ ಬರೆದಿದ್ದವು. ಹೀಗಾಗಿ, ಸರ್ಕಾರದ ಆದೇಶ ಹಿನ್ನೆಲೆಯಾಗಿದೆ.

ನಾವದಗಿ: ಸಮವಸ್ತ್ರ ಉಲ್ಲೇಖಿಸಬಾರದು ಎಂಬ ವಿಚಾರದಲ್ಲಿ ಸರ್ಕಾರ ಎಚ್ಚರಿಕೆಯಿಂದ ಇದೆ. ಆದರೆ, ಸಮವಸ್ತ್ರದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ಅವಕಾಶವಿದೆ. ಕೆಲವು ಸಂಸ್ಥೆಗಳು ಹಿಜಾಬ್‌ ನಿಷೇಧಿಸಿವೆ. ಆದರೆ, ಸರ್ಕಾರದ ಆದೇಶವನ್ನು ಪ್ರಶ್ನಿಸಲಾಗಿದೆ. ಆದರೆ, ಇಲ್ಲಿ ಸರ್ಕಾರ ಯಾವುದೇ ಹಕ್ಕನ್ನು ನಿಷೇಧಿಸಿಲ್ಲ.

ನಾವದಗಿ: ಶಿಕ್ಷಣ ಸಂಸ್ಥೆಯ ನಿಯಮಗಳನ್ನು ಪಾಲಿಸಿ ಎಂದಷ್ಟೇ ಸರ್ಕಾರ ಹೇಳಿದೆ.

ನ್ಯಾ. ಗುಪ್ತ: ಆದರೆ, ನಿಯಮ 11ರ ಅಡಿ ಅಂಥ ನಿಯಮ ರೂಪಿಸಲು ಅಧಿಕಾರ ನೀಡುವುದಿಲ್ಲ ಎಂದು ವಾದಿಸಲಾಗಿದೆ.

ನಾವದಗಿ: ಒಮ್ಮೆ ಸರ್ಕಾರದ ಆದೇಶವನ್ನು ಪ್ರಶ್ನಿಸಲಾಗಿಲ್ಲ ಎಂದು ಹೇಳಲಾಗಿತ್ತು. ಸಂವಿಧಾನದ 25ನೇ ವಿಧಿಯ ಉಲ್ಲಂಘನೆ ಇತ್ಯಾದಿಯ ಕಡೆಗೆ ವಾದ ತಿರುಗಿಸಲಾಗಿತ್ತು.

ನ್ಯಾ. ಗುಪ್ತ: ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಯು ಹಿಜಾಬ್‌ ಮುಂದುವರಿಸಬಹುದು?

ನಾವದಗಿ: ಖಂಡಿತವಾಗಿಯೂ ಹೌದು. ಅದಕ್ಕೆ ಅವರು ಅನುಮತಿಸಬಹುದಾಗಿದ್ದು, ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲ್ಲ. ಎಚ್ಚರಿಕೆಯಿಂದ ಸರ್ಕಾರ ಅದರಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ.

ಪೀಠ: ಹಾಗಾದರೆ ಸರ್ಕಾರದ ಸಂಸ್ಥೆಗಳಲ್ಲಿನ ಸ್ಥಿತಿಯೇನು?

ನಾವದಗಿ: ಈ ವಿಚಾರದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧರಿಸಲು ಅವಕಾಶ ಮಾಡಿಕೊಡಲಾಗಿದೆ. ಉಡುಪಿ ಕಾಲೇಜಿನಂತೆ ಕೆಲವು ಕಡೆ ಹಿಜಾಬ್‌ ಗೆ ಅನುಮತಿಸದೇ ಇರಲು ನಿರ್ಧರಿಸಲಾಗಿದೆ. ಆದರೆ, ಇಲ್ಲಿ ಅದನ್ನು ಪ್ರಶ್ನಿಸಲಾಗಿಲ್ಲ.

ನ್ಯಾ. ಗುಪ್ತ: ಕ್ರಿಶ್ಚಿಯನ್ನರು ನಡೆಸುವ ಸಂಸ್ಥೆಯಲ್ಲಿ ಹಿಜಾಬ್‌ಗೆ ಅನುಮತಿ ಇದೆಯೇ?

ನಾವದಗಿ: ಇಲ್ಲಿ, ಅವರು ಅವಕಾಶ ನೀಡಿಲ್ಲ.

ಹೆಗ್ಡೆ: ಆಕ್ಷೇಪಣೆಯಲ್ಲಿ ಇದೆಲ್ಲವನ್ನೂ ಅವರು ಉಲ್ಲೇಖಿಸಬೇಕು. ಅದನ್ನು ಉಲ್ಲೇಖಿಸದಿರುವುದರಿಂದ ಅದನ್ನು ಇಲ್ಲಿ ಅವರು ಪ್ರಸ್ತಾಪಿಸುವಂತಿಲ್ಲ.

ಎಎಸ್‌ಜಿ: ಶಾಸನ ಮೌನವಾಗಿದ್ದಾಗ ಸಂವಿಧಾನದ 162ನೇ ವಿಧಿಯಡಿ ಕಾರ್ಯಾದೇಶದ ಅಧಿಕಾರ ಬರಲಿದೆ.

ಹಿರಿಯ ವಕೀಲ ದೇವದತ್‌ ಕಾಮತ್‌: ಯಾವುದೇ ಸಾಂವಿಧಾನಿಕ ಪ್ರಶ್ನೆಗೆ ಈ ಪ್ರಕರಣ ಕಾರಣವಾಗುವುದಿಲ್ಲ ಎಂಬುದು ನನ್ನ ವಾದವಾಗಿದೆ.

ಪೀಠ: ಧವನ್‌ ಅವರೂ ವಾದಿಸಲಿದ್ದಾರೆ. ಧವನ್‌ ಸಿದ್ಧರಾಗಿ. ಸೆಪ್ಟೆಂಬರ್‌ 7ರಂದು ಮಧ್ಯಾಹ್ನ 2ಕ್ಕೆ ವಿಚಾರಣೆ ಮುಂದೂಡಿಕೆ.

(ಕೃಪೆ: ಬಾರ್ & ಬೆಂಚ್)

Join Whatsapp
Exit mobile version