Home Uncategorized ಕೊಡಗು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನ | ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸುನ್ನಿ ಮಹಲ್...

ಕೊಡಗು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನ | ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸುನ್ನಿ ಮಹಲ್ ಫೆಡರೇಷನ್ ಒತ್ತಾಯ

ಮಡಿಕೇರಿ : ಶಾಂತಿ ಸೌಹಾರ್ದತೆಯೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವ ಜಿಲ್ಲೆಯಲ್ಲಿ 1ವರ್ಗವನ್ನು ಗುರಿಯಾಗಿಸಿಕೊಂಡು ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಅವರ ಮೇಲೆ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದರ ಮೂಲಕ
ಶಾಂತಿ ನೆಲೆಸುವಂತೆ ಮಾಡಬೇಕು.


ಸೌಹಾರ್ದತೆಗೆ ದಕ್ಕೆ ತರುವ ಉದ್ದೇಶದಿಂದ ಘರ್ಷಣೆ ಸೃಷ್ಟಿಸಿ ಅಶಾಂತಿ ಮೂಡಿಸಲು ಕೆಲವರು ಪ್ರಯತ್ನಿಸುತ್ತಿದ್ದು, ಪೊಲೀಸ್ ಇಲಾಖೆ ಷಡ್ಯಂತ್ರ ರೂಪಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸುನ್ನಿ ಮಹಲ್ ಫೆಡರೇಷನ್ ಒತ್ತಾಯಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಫೆಡರೇಷನ್ ನ ಕಾರ್ಯದರ್ಶಿ ಸಿ.ಎಂ.ಹಮೀದ್ ಮೌಲವಿ, ಕೊಡಗಿನಲ್ಲಿ ಎಲ್ಲಾ ಜಾತಿ, ಧರ್ಮದವರು ಶಾಂತಿ, ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ರಾಜಕೀಯ ಲಾಭಕ್ಕಾಗಿ ಕೆಲವರು ಕಲಹ ಸೃಷ್ಟಿಸಿ ಅಶಾಂತಿ ಮೂಡಿಸುತ್ತಿದ್ದಾರೆ. ಚುನಾವಣೆಗಳು ಸಮೀಪಿಸಿದಾಗಲೆಲ್ಲ ಜಿಲ್ಲೆಯಲ್ಲಿ ಕೋಮು ಭಾವನೆ ಕೆರಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದು ಖಂಡನೀಯ ಎಂದರು.

ಇತ್ತೀಚೆಗೆ ಶನಿವಾರಸಂತೆ ಠಾಣೆಯ ಎದುರು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪರ ಘೋಷಣೆ ಕೂಗಿದ್ದಾರೆ. ಆದರೆ ಪಾಕಿಸ್ತಾನ್ ಝಿಂದಾಬಾದ್ ಎಂದು ವಾಯ್ಸ್ ಎಡಿಟ್ ಮಾಡಿ ದೇಶದ್ರೋಹ ಕೃತ್ಯ ಎಸಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟದ್ದಾರೆ. ಇದರ ಹಿಂದೆ ಕರಾಳ ಕೈಗಳು ಕೆಲಸ ನಿರ್ವಹಿಸುತ್ತಿದೆ ಎಂದು ಆರೋಪಿಸಿದ ಅವರು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಫೆಡರೇಷನ್‌ನ ಉಪಾಧ್ಯಕ್ಷ ತಮ್ಲಿಕ್ ದಾರಿಮಿ ಮಾತನಾಡಿ, ಕೋವಿಡ್, ಪ್ರಕೃತಿ ವಿಕೋಪ ಸಂದರ್ಭ ಜಾತಿ ಧರ್ಮದ ಭೇದ ಮಾಡದೇ ಎಲ್ಲರೂ ಒಟ್ಟಿಗೆ ಇದ್ದೇವೆ. ಆದರೆ, ಇತ್ತೀಚೆಗೆ ಜಾತಿಜಾತಿಗಳ ನಡುವೆ ವೈಮನಸ್ಯ ಮೂಡಿಸಲಾಗುತ್ತಿದೆ. ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಸ್ಥಿತಿ ಕೈಮೀರುವ ಮೊದಲು ಕಾನೂನು ಬಿಗಿಗೊಳಿಸಬೇಕೆಂದು ಆಗ್ರಹಿಸಿದರು.


ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸಿ.ಎಂ.ಅಬ್ದುಲ್ ಕರೀಂ, ಪ್ರಮುಖರಾದ ಉಮರ್ ಫೈಜ್ಹಿ, ಹಾರುಲ್ ಹಾಜಿ ಹಾಗೂ ಹಸನ್ ಕುಂಜ್ಞಿ ಹಾಜಿ ಉಪಸ್ಥಿತರಿದ್ದರು.

Join Whatsapp
Exit mobile version