ಬೆಂಗಳೂರು: ಬಿಜೆಪಿಯವರು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ರ ರಾಜಕೀಯ ಭವಿಷ್ಯವನ್ನು ಸಂಪೂರ್ಣವಾಗಿ ಹಾಳು ಮಾಡಿ ಬೀದಿಪಾಲು ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ ನರೇಂದ್ರ ಮೋದಿ ಮುಂದಿನ ಹತ್ತು ವರ್ಷವೂ ಪ್ರಧಾನಿಯಾಗಿರಬೇಕು ಎಂದು ಭಾಷಣ ಮಾಡಿಕೊಂಡು ಬರುತ್ತಿದ್ದರು.ಈಗ ಅವರನ್ನೇ ಬಿಜೆಪಿ ಕೈಬಿಡುವ ಸ್ಥಿತಿ ಇದೆ. ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದರೆ, ಸುಮಲತಾಗೆ ಕ್ಷೇತ್ರ ಇಲ್ಲವಾಗುತ್ತದೆ. ಅವರಿಗೆ ಬೇರೆ ಯಾವ ಪಕ್ಷವೂ ಟಿಕೆಟ್ ಕೊಡುವ ಲಕ್ಷಣಗಳಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯವರು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ ಕಾಂಗ್ರೆಸ್ ವಕ್ತಾರ, ಮಂಗಳೂರಿನ ಜೆರೇಸಾ ಶಾಲೆಯ ವಿಚಾರವನ್ನು ಮುಂದಿಟ್ಟುಕೊಂಡು ಗಲಭೆ ಎಬ್ಬಿಸಿದ್ದಾರೆ. ನಿನ್ನೆ ಹುಣಸೂರಿನಲ್ಲಿ ಈಡಿಗ ಸಮುದಾಯದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಕೋಮು ಬಣ್ಣ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪಿರಿಯಾಪಟ್ಟಣದ ದರ್ಗಾವೊಂದರಲ್ಲಿ ದೇವರ ಮೂರ್ತಿಯಿಟ್ಟು ಗಲಭೆ ಸೃಷ್ಟಿಸುವ ಯತ್ನ ನಡೆಯುತ್ತಿದೆ ಎಂದು ಹೇಳಿದರು.