ಗುವಾಹಟಿ: ಟಿ20 ಸರಣಿಯ 2ನೇ ಪಂದ್ಯದಲ್ಲಿ ಪ್ರವಾಸಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ರಾಹುಲ್ -ಕೊಹ್ಲಿ-ಸೂರ್ಯಕುಮಾರ್ ಯಾದವ್ ಜೋಡಿ, ಆಫ್ರಿಕಾ ಗೆಲುವಿಗೆ 238 ರನ್‌ಗಳ ಕಠಿಣ ಗುರಿ ನಿಗದಿ ಪಡಿಸಿದೆ.
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ತೆಂಬ ಬವುಮಾ, ರೋಹಿತ್ ಬಳಗವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಆದರೆ ಆಫ್ರಿಕಾ ನಾಯಕನ ಯೋಜನೆಗಳನ್ನು ತಲೆಕೆಳಗಾಗಿಸಿದ ರೋಹಿತ್ ಬಳಗ, ಹರಿಣ ಬೌಲರ್‌ಗಳ ಮೇಲೆ ದಂಡತ್ತಿ ಹೋದರು. ಆರಂಭಿಕ ಕೆ.ಎಲ್. ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಭರ್ಜರಿ ಅರ್ಧಶತಕ ದಾಖಲಿಸಿದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ 49 ರನ್‌ಗಳಿಸಿ ಅಜೇಯರಾಗುಳಿದರು. ಆ ಮೂಲಕ ಕೇವಲ ಒಂದು ರನ್‌ನಿಂದ ಅರ್ಧಶತಕ ವಂಚಿತರಾದರು.
ನಾಯಕ ರೋಹಿತ್ ಶರ್ಮಾ 43 ರನ್ ಮತ್ತು ಕೊನೆಯಲ್ಲಿ ದಿನೇಶ್ ಕಾರ್ತಿಕ್ 7 ಎಸೆತಗಳಲ್ಲಿ 17 ರನ್‌ಗಳಿಸಿ ಅಜೇಯರಾಗುಳಿದರು. ರಾಹುಲ್ 28 ಎಸೆತಗಳಲ್ಲಿ 57 ರನ್‌ಗಳಿಸಿದರೆ (4×5, 6×4), ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. 22 ಎಸೆತಗಳಲ್ಲಿ 61 ರನ್‌ಗಳಿಸಿದ್ದ ವೇಳೆ ರನೌಟ್‌ಗೆ ಬಲಿಯಾದರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 1000 ರನ್ ಪೂರ್ತಿಗೊಳಿಸಿದರು.
ಅಂತಿಮವಾಗಿ ಭಾರತ ನಿಗಧಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 237 ರನ್‌ಗಳಿಸಿ ಇನ್ನಿಂಗ್ಸ್ ಮುಗಿಸಿದೆ. ಇಂದಿನ ಪಂದ್ಯವನ್ನು ಗೆದ್ದರೆ ಸರಣಿಯನ್ನೂ ತನ್ನದಾಗಿಸಿಕೊಳ್ಳಲಿದೆ. ತಿರುವನಂತಪುರಂನಲ್ಲಿ ನಡೆದಿದ್ದ ಸರಣಿಯ ಮೊದಲನೇ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತ್ತು.