ಚಿಕ್ಕಮಗಳೂರು: ಸಂಸ್ಕೃತ ಭಾಷೆ ಅಧ್ಯಯನ ಮಾಡಲು 6 ಮಂದಿ ವಿದೇಶೀ ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಿದ್ದಾರೆ.
ಪ್ರಸ್ತುತ ಸಂಸ್ಕೃತ ಅಧ್ಯಯನಕ್ಕೆಂದು ಬಂದವರು ಮೂಲತಃ ಇಸ್ರೇಲ್ ದೇಶದವರು. ಇಸ್ರೇಲ್ ನಲ್ಲಿ ಸಂಸ್ಕೃತದಲ್ಲೇ ಪಿಎಚ್ ಡಿ ಪಡೆದ ಉಪನ್ಯಾಸಕ ರಫಿಯೊಂದಿಗೆ 6 ಮಂದಿ ವಿದ್ಯಾರ್ಥಿಗಳೊಂದಿಗೆ ಭಾರತಕ್ಕೆ ಬಂದಿದ್ದಾರೆ.
ಉಪನ್ಯಾಸಕ ರಫಿ, ಭಾರತದ ಸಂಸ್ಕೃತ, ಭಾಷೆ, ಆಚಾರ-ವಿಚಾರ ತಿಳಿಸುವ ಸಲುವಾಗಿ ವಿದ್ಯಾರ್ಥಿಗಳಾದ ಇನ್ಬಾಲ್,ಆದಿ, ಗಾಲಿ, ಅವ್ಯಾದ್,ಎಲಾ, ಓಲ್ಗಾ ಎಂಬ ತನ್ನ ಆರು ಮಂದಿ ವಿದ್ಯಾರ್ಥಿಗಳನ್ನು ಕರೆತಂದಿದ್ದಾರೆ. ಇಸ್ರೇಲ್ ನಲ್ಲಿ 2ನೇ ವರ್ಷದ ಬಿ.ಎ ಪದವಿಯನ್ನು ವ್ಯಾಸಂಗ ಮಾಡುತ್ತಿರುವ ಈ 6 ಮಂದಿ ವಿದ್ಯಾರ್ಥಿಗಳು ಹೀರೇಮಗಳೂರಿನಲ್ಲಿ ನೆಲೆಸಿದ್ದಾರೆ.
ಇಸ್ರೇಲ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಇವರು ರಜೆ ಸಮಯದ 12 ದಿನಗಳ ಕಾಲ ಸಂಸ್ಕೃತ ಕಲಿಯುವ ಸಲುವಾಗಿ ಉಪನ್ಯಾಸಕ ರಫಿ ಜೊತೆ ಭಾರತಕ್ಕೆ ಬಂದಿದ್ದಾರೆ. ಇದೀಗ ಹಿರೇಮಗಳೂರಿನಲ್ಲಿ ಕಾಳಿದಾಸನ ರಘುವಂಶದ ಕಾವ್ಯದ ಜೊತೆಗೆ ಶ್ಲೋಕಗಳನ್ನು ಕಲಿಯುತ್ತಿದ್ದಾರೆ.
ಭಾಷೆ ಗೊತ್ತಿಲ್ಲ, ಸ್ನೇಹಿತರು-ಸಂಬಂಧಿಗಳಿಲ್ಲ, ಇಲ್ಲಿನ ಊಟ-ತಿಂಡಿಯ ಅರಿವಿಲ್ಲ, ಆದರೂ ಸಹ ಹಿರೇಮಗಳೂರಿನಲ್ಲಿ ಉಳಿದುಕೊಂಡು ಸಂಸ್ಕೃತ ಕಲಿಯುತ್ತಿರುವ ಈ ವಿದ್ಯಾರ್ಥಿಗಳ ಭಾರತೀಯ ಪ್ರೀತಿಗೆ ಸ್ಥಳೀಯರೇ ಮನಸೋತಿದ್ದಾರೆ.