ಮಂಗಳೂರು: ಮಂಗಳೂರು ವಿವಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ನಿರಾಕರಿಸಿರುವ ಬೆನ್ನಲ್ಲೇ ಸಂತ್ರಸ್ತ ವಿದ್ಯಾರ್ಥಿನಿಯರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಲು ಡಿಸಿ ಕಚೇರಿಗೆ ತೆರಳಿದ್ದಾರೆ. ಇಂದು ಕೂಡ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿರುವ 12 ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿ ಭೇಟಿಗೆ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.
ಈಗಾಗಲೇ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ವಿದ್ಯಾರ್ಥಿನಿಯರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿಗಾಗಿ ಕಾಯುತ್ತಿದ್ದು, ಡಿ.ಸಿ ಏನು ಹೇಳುತ್ತಾರೆಂದು ಕಾದು ಕುಳಿತಿದ್ದಾರೆ. ವಿದ್ಯಾರ್ಥಿನಿಯರ ಭೇಟಿ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಡಿಸಿ ಕಚೇರಿ ಪ್ರವೇಶಿಸದಂತೆ ವಿದ್ಯಾರ್ಥಿನಿಯರಿಗೆ ಮಹಿಳಾ ಪೊಲೀಸ್ ಅಧಿಕಾರಿ ತಾಕೀತು ಮಾಡಿದ್ದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ವಿದ್ಯಾರ್ಥಿನಿಯರು ಭೇಟಿಗಾಗಿ ಕುಳಿತಿದ್ದಾರೆ.