Home ಟಾಪ್ ಸುದ್ದಿಗಳು ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಜಮೀಯತ್ ಉಲಮಾ-ಎ-ಹಿಂದ್ ನಿರ್ಣಯ ಅಂಗೀಕಾರ

ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಜಮೀಯತ್ ಉಲಮಾ-ಎ-ಹಿಂದ್ ನಿರ್ಣಯ ಅಂಗೀಕಾರ

ದೇವಬಂದ್ (ಯುಪಿ): ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಕೆಲವು ರಾಜ್ಯಗಳ ನಿರ್ಧಾರಗಳಿಗೆ ಜಮೀಯತ್ ಉಲಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಂಘಟನೆಯು ವಾರಣಾಸಿಯ ಜ್ಞಾನವಾಪಿ ಮಸೀದಿ ಪ್ರಕರಣ, ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ಗುರಿಯಾಗಿಸಿ ವಿವಾದ ಸೃಷ್ಟಿಸಿರುವುದರ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದೆ ಎಂದು ಅವರು ಹೇಳಿದ್ದಾರೆ.

ಜಮೀಯತ್ ಆಡಳಿತ ಸಮಿತಿಯ ವಾರ್ಷಿಕ ಎರಡು ದಿನಗಳ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಮರನ್ನು ದೇಶ ತೊರೆಯುವಂತೆ ಹೇಳುವವರೇ ದೇಶ ತೊರೆಯಬೇಕು ಎಂದು ಕರೆ ನೀಡಿದರು. “ಸಮುದಾಯದ ಜನರು ಇದಕ್ಕೆ ಭಯಪಡುವ ಅಗತ್ಯವಿಲ್ಲ, ಮುಸ್ಲಿಮರು ಧರ್ಮಕ್ಕೆ ನಿಷ್ಠರಾಗಿದ್ದು, ದೃಢತೆಯನ್ನು ತೋರಿಸಲು ಅವರು ಕೇಳಿಕೊಂಡರು.

“ಹಳೆಯ ವಿವಾದಗಳನ್ನು ಜೀವಂತವಾಗಿಡಲು ಮತ್ತು ಇತಿಹಾಸದಲ್ಲಿ ನಡೆದಿದೆ ಎನ್ನಲಾದ ಮಿತಿಮೀರಿದ ಮತ್ತು ತಪ್ಪುಗಳನ್ನು ಸರಿಪಡಿಸುವ ಹೆಸರಿನಲ್ಲಿ ಅಭಿಯಾನಗಳನ್ನು ನಡೆಸುವುದರಿಂದ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ” ಎಂದು ಆಕ್ಷೇಪಿಸಿದರು.

ಜ್ಞಾನವಾಪಿ ಮಸೀದಿ ಮತ್ತು ಮಥುರಾ ಈದ್ಗಾ ಪ್ರಕರಣಗಳ ಕುರಿತ ನಿರ್ಣಯದಲ್ಲಿ, ಪುರಾತನ ದೇಗುಲಗಳ ಬಗ್ಗೆ ಪದೇ ಪದೇ ವಿವಾದಗಳನ್ನು ಹುಟ್ಟುಹಾಕುವ ಮೂಲಕ ದೇಶದ ಶಾಂತಿ ಮತ್ತು ನೆಮ್ಮದಿಯನ್ನು ಕದಡುವ ಶಕ್ತಿಗಳನ್ನು ಬೆಂಬಲಿಸುವ ರಾಜಕೀಯ ಪಕ್ಷಗಳ ವರ್ತನೆಗೆ ಸಂಘಟನೆಯು ತನ್ನ ತೀವ್ರ ಬೇಸರ ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದಾರೆ.

ಸಮಾವೇಶದಲ್ಲಿ ಹನ್ನೊಂದು ವಿಭಿನ್ನ ನಿರ್ಣಯಗಳನ್ನು ಅಂಗೀಕರಿಸಲಾಯಿತು. “ಇಸ್ಲಾಮಿಕ್ ಕಾನೂನುಗಳು ಮತ್ತು ಸಂಪ್ರದಾಯಗಳಲ್ಲಿ ಯಾವುದೇ ಹಸ್ತಕ್ಷೇಪವನ್ನು ಯಾವುದೇ ಮುಸಲ್ಮಾನ ಒಪ್ಪುವುದಿಲ್ಲ ಎಂಬುದನ್ನು ಈ ಸಮ್ಮೇಳನವು ಸ್ಪಷ್ಟಪಡಿಸಲು ಬಯಸುತ್ತದೆ” ಎಂದು ನಿರ್ಣಯವು ಹೇಳಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸರಕಾರ ಪ್ರಯತ್ನಿಸಿದರೆ ಸಂವಿಧಾನದ ಪರಿಧಿಯಲ್ಲಿಯೇ ವಿರೋಧಿಸಲಾಗುವುದು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಸಂಘಟನೆಯ ಸುಮಾರು 2,000 ಸದಸ್ಯರು ಮತ್ತು ಇತರ ಗಣ್ಯರು ಸಮಾವೇಶದಲ್ಲಿ ಭಾಗವಹಿಸಿದ್ದರು.

Join Whatsapp
Exit mobile version