Home ಟಾಪ್ ಸುದ್ದಿಗಳು ಮುಂಬೈಯಲ್ಲಿ ಬಿರುಗಾಳಿ ಮತ್ತು ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಮುಂಬೈಯಲ್ಲಿ ಬಿರುಗಾಳಿ ಮತ್ತು ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಬಿರುಗಾಳಿ ಮತ್ತು ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿಮಾನ, ಮೆಟ್ರೋ ಹಾಗೂ ಸ್ಥಳೀಯ ರೈಲುಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ದಾದರ್, ಕುರ್ಲಾ, ಮಾಹಿಮ್, ಘಾಟ್‌ಕೋಪರ್, ಮುಲುಂಡ್ ಮತ್ತು ವಿಖ್ರೋಲಿ ಉಪನಗರಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ದಕ್ಷಿಣ ಮುಂಬೈನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ.ಥಾಣೆ, ಅಂಬರ್ ನಾಥ್, ಬದ್ಲಾಪುರ್, ಕಲ್ಯಾಣ್ ಮತ್ತು ಉಲ್ಲಾಸ್‌ನಗರದಲ್ಲಿಯೂ ಸಹ ಬಿರುಸಿನ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿದೆ. ಮುಂಬೈನ ಅಲಲ್ಲಿ ಮುಂದಿನ 3-4 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿರುಗಾಳಿ ಹಾಗೂ ಹವಾಮಾನ ವೈಫರೀತ್ಯದಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ15 ವಿಮಾನಗಳ ಮಾರ್ಗವನ್ನು ಬದಲಿಸಲಾಯಿತು. ಸಂಜೆ 5-30 ರಿಂದ ಮತ್ತೆ ವಿಮಾನ ಹಾರಾಟ ಆರಂಭವಾಗಿದೆ ಎಂದು ಖಾಸಗಿ ಏರ್ ಪೋರ್ಟ್ ನಿರ್ವಾಹಕರೊಬ್ಬರು ಹೇಳಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 66 ನಿಮಿಷಗಳ ಕಾಲ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ವಿಮಾನ ನಿಲ್ದಾಣ ನಿರ್ವಾಹಕರು ಮಾಹಿತಿ ನೀಡಿದ್ದಾರೆ.

ತೆಂಗಿನ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೇಘವಾಡಿ ನಾಕಾದಲ್ಲಿ ನಡೆದಿದೆ.

ಭಾರಿ ಮಳೆ, ಗಾಳಿಗೆ ತಂತಿಯ ಮೇಲೆ ಬ್ಯಾನರ್ ಬಿದ್ದ ನಂತರ ಆರೆ ಮತ್ತು ಅಂಧೇರಿ ಪೂರ್ವ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

Join Whatsapp
Exit mobile version