Home ಟಾಪ್ ಸುದ್ದಿಗಳು ಬೀದಿ ಬದಿ ವ್ಯಾಪಾರಿಗಳ ಮೇಲಿನ ಟೈಗರ್ ಕಾರ್ಯಾಚರಣೆ ನಿಲ್ಲಿಸಿ: ರಮಾನಾಥ ರೈ ಆಗ್ರಹ

ಬೀದಿ ಬದಿ ವ್ಯಾಪಾರಿಗಳ ಮೇಲಿನ ಟೈಗರ್ ಕಾರ್ಯಾಚರಣೆ ನಿಲ್ಲಿಸಿ: ರಮಾನಾಥ ರೈ ಆಗ್ರಹ

ಮಂಗಳೂರು‌: ನಗರದ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡುವ ಬಿಜೆಪಿ ಆಡಳಿತದ ಮಂಗಳೂರು ಮಹಾನಗರ ಪಾಲಿಕೆಯ ಟೈಗರ್ ಕಾರ್ಯಾಚರಣೆ ಅನ್ಯಾಯ ಮತ್ತು ತಾರತಮ್ಯದಿಂದ ಕೂಡಿದೆ. ಕೂಡಲೆ ಟೈಗರ್ ಕಾರ್ಯಾಚರಣೆ ಸ್ಥಗಿತಗೊಳಿಸಿ ಬೀದಿ ಪಾಲಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ‌ ಪ್ರಕಟನೆ ನೀಡಿರುವ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡದೆ ಅವರ ಸೊತ್ತುಗಳನ್ನು ಜೆಸಿಬಿ ಬಳಸಿ ಧ್ವಂಸ ಮಾಡಿ ತೆರವು ಮಾಡಿರುವ ಪಾಲಿಕೆಯ ಕಾರ್ಯಾಚರಣೆ ಅನ್ಯಾಯ ಮತ್ತು ಅಮಾನವೀಯ. ಬೀದಿ ಬದಿ ವ್ಯಪಾರದ ಕುರಿತು ಸರಕಾರಗಳೆ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿ ಪಾಲಿಕೆಯ ಬಿಜೆಪಿ ಆಡಳಿತ ಬಡವರ ಹೊಟ್ಟೆಗೆ ಹೊಡೆಯುವ ಪಾಪದ ಕೆಲಸ ಮಾಡಿದೆ. ದೇಶದ ಎಲ್ಲಾ ಮಹಾ ನಗರಗಳಲ್ಲೂ ಬೀದಿ ಬದಿ ವ್ಯಾಪಾರ ಇದೆ. ಮಂಗಳೂರು ನಗರದಲ್ಲೂ ಬೀದಿ ಬದಿ ವ್ಯಾಪಾರವನ್ನು ಅವಲಂಬಿಸಿರುವ ಬಡ ವ್ಯಾಪಾರಿಗಳು ಹಾಗೂ ಖರೀದಿದಾರರಾದ ಕಡಿಮೆ ಆದಾಯದ ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರ ಹಿತಾಸಕ್ತಿಗಳನ್ನೂ ಕಾಪಾಡುವುದು, ಅವರ ಪರವಾಗಿ ನಿಲ್ಲುವುದೂ ಸಹ ಆಡಳಿತದ ಜವಾಬ್ದಾರಿಯಾಗಿದೆ ಎಂದರು.

ಟೈಗರ್ ಕಾರ್ಯಾಚರಣೆ ಬಿಜೆಪಿ ಆಡಳಿತದ ನಗರ ಪಾಲಿಕೆಯ ಬಡವರ ವಿರೋಧಿ ಮನಸ್ಥಿತಿಯ ದ್ಯೋತಕವಾಗಿದೆ‌. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹತ್ತಾರು ಸಮಸ್ಯೆಗಳಿದ್ದು. ಡೇಂಘೀ ಸೇರಿ ಹಲವು ರೋಗಗಳು ಹರಡುತ್ತಿವೆ, ಗುಡ್ಡ ಜರಿತ ಆಗುತ್ತಿದೆ, ಸ್ನಾರ್ಟ್ ಸಿಟಿ ಕಾಮಗಾರಿಗಳ ಅವಾಂತರಗಳಿವೆ, ಚರಂಡಿ ಸಮಸ್ಯೆ, ರಸ್ತೆಯಲ್ಲಿ ಮಳೆನೀರು ಹರಿಯುವುದು, ಪೈಪ್‌ಲೈನ್‌ ಸಮಸ್ಯೆಗಳಿವೆ. ಈ ಅಗತ್ಯ ಕಾರ್ಯಗಳ ಕಡೆ ಗಮನ‌ ನೀಡದೆ ಅನಗತ್ಯ ಕಾರ್ಯಗಳಿಗೆ ಮುಂದಾಗಿರುವ ಪಾಲಿಕೆಯ ಬಿಜೆಪಿ ಆಡಳಿತವು ತನ್ನ ವೈಫಲ್ಯಗಳನ್ನು ಮುಚ್ಷಿಕೊಳ್ಳಲು ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಮಾಡಿ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿಯ ಈ ದುರಾಡಳಿತವನ್ನು ನಾವು ಖಂಡಿಸುತ್ತೇವೆ. ಬೀದಿ ಬದಿ ವ್ಯಾಪಾರ ಮಾಡುವ ಬಡವರ ಅಹವಾಲುಗಳಿಗೆ ನಮ್ಮ ಬೆಂಬಲ ಇದೆ.
ನಗರ ಪಾಲಿಕೆಯ ಆಡಳಿತ ತಕ್ಷಣವೇ ಈ ಅನ್ಯಾಯಗಳನ್ನು ಸರಿಪಡಿಸಿ ಬಡವರಿಗೆ ನ್ಯಾಯ ನೀಡಬೇಕು ಎಂದರು.

Join Whatsapp
Exit mobile version