ಮೈಸೂರು: ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಪ್ರಸ್ತುತ ಮುಜರಾಯಿ ಇಲಾಖೆ ಆಯುಕ್ತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿದೆ.
ರೋಹಿಣಿ ಸಿಂಧೂರಿ ಮೇಲಿರುವ ಅಕ್ರಮ ಆರೋಪಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಜೇಮ್ಸ್ ತರಕನ್ ಆದೇಶಿಸಿದ್ದಾರೆ. ರೋಹಿಣಿ ಸಿಂಧೂರಿ ವಿರುದ್ಧ ಬಟ್ಟೆ ಬ್ಯಾಗ್ ಖರೀದಿ, ಪಾರಂಪರಿಕ ಕಟ್ಟಡವಾದ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಈಜುಕೊಳ ಹಾಗೂ ಜಿಮ್ ನಿರ್ಮಾಣ, ಕೊರೊನಾದಿಂದಾಗಿ ಮೃತಪಟ್ಟವರ ತಪ್ಪು ಲೆಕ್ಕ ಎಂಬೆಲ್ಲಾ ಆರೋಪಗಳನ್ನು ಮಾಡಿರುವ ಶಾಸಕ ಸಾ.ರಾ.ಮಹೇಶ್ ಸೂಕ್ತ ತನಿಖೆ ನಡೆಸುವಂತೆ ಸರ್ಕಾರವನ್ನು ಆಗ್ರಹಿಸಿದ್ದರು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ, ಹಿರಿಯ ಐಪಿಎಸ್ ಅಧಿಕಾರಿ ಎನ್.ಜಯರಾಮ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, 30 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.