Home ಕರಾವಳಿ ಉಡುಪಿಯ ಕಲ್ಮತ್ ಮಸೀದಿಗೆ ಮಂಜೂರಾಗಿದ್ದ ಜಾಗ ವಶಕ್ಕೆ ಪಡೆದ ರಾಜ್ಯ ಸರಕಾರ!

ಉಡುಪಿಯ ಕಲ್ಮತ್ ಮಸೀದಿಗೆ ಮಂಜೂರಾಗಿದ್ದ ಜಾಗ ವಶಕ್ಕೆ ಪಡೆದ ರಾಜ್ಯ ಸರಕಾರ!

ಉಡುಪಿ: ಇಲ್ಲಿನ ಕೊಡವೂರು ಗ್ರಾಮದಲ್ಲಿ ವಕ್ಫ್ ಬೋರ್ಡ್ ಮೂಲಕ ಕಲ್ಮತ್ ಮಸೀದಿಗೆ ಮಂಜೂರಾಗಿದ್ದ ಜಾಗವನ್ನು ರಾಜ್ಯ ಬಿಜೆಪಿ ಸರಕಾರ ಮರಳಿ ವಶಕ್ಕೆ ಪಡೆದಿದೆ.

ಉಡುಪಿ ಜಿಲ್ಲೆಯ ಶಾಸಕ ರಘುಪತಿ ಭಟ್ ಇತ್ತೀಚೆಗೆ ಕಂದಾಯ ಸಚಿವ ಆರ್. ಅಶೋಕರನ್ನು ಭೇಟಿಯಾಗಿ ಸ್ಥಳೀಯ ಮಾಹಿತಿಯನ್ನು ನೀಡಿದ್ದರು, ಅದಲ್ಲದೇ ಜಾಗವನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ, ತಕ್ಷಣವೇ ಸರಕಾರ ಮರಳಿ ವಶಕ್ಕೆ ಪಡೆಯಬೇಕು ಎಂದು ಮನವಿ ಸಲ್ಲಿಸಿದ್ದರು. ಅದಕ್ಕೂ ಮೊದಲು ಉಡುಪಿ ಜಿಲ್ಲಾಧಿಕಾರಿ ಕಾನೂನು ಸುವ್ಯವಸ್ಥೆ ಮತ್ತು ಇನ್ನಿತರ ಹಲವು ಸಮಸ್ಯೆಗಳ ನೆಪವೊಡ್ಡಿ ಮಸ್ಜಿದ್ ಜಾಗಕ್ಕೆ ಸಂಬಂಧಿಸಿದ ಗಝೆಟ್ ನೊಟಿಫಿಕೇಷನ್ ರದ್ದುಪಡಿಸಲು ಸರಕಾರದ ಕಂದಾಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದರು.

ನೂರಾರು ವರ್ಷಗಳ ಇತಿಹಾಸವಿರುವ, ಟಿಪ್ಪು ಸುಲ್ತಾನ್ ಕಾಲದ , 1908ರಿಂದ ಈ ವರೆಗೂ ಸರಕಾರದಿಂದ ತಸ್ದೀಕ್ ಪಡೆಯುತ್ತಿದ್ದ, 1993ರಲ್ಲಿ ವಕ್ಫ್ ನೋಂದಣೆಯಾಗಿರುವ ಮತ್ತು ಗಝೆಟೆಡ್ ನೊಟಿಫಿಕೇಷನ್ ಆಗಿರುವ ಈ ಮಸ್ಜಿದ್ ಜಾಗವನ್ನು ವಶಕ್ಕೆ ಪಡೆದಿರುವ ಸರಕಾರದ ನಡೆಯು ಸಾರ್ವಜನಿಕ ವಲಯದಲ್ಲಿ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

“ಕಾನೂನು ಸುವ್ಯವಸ್ಥೆ ಎಂಬುದು ಇಲ್ಲಿ ಇದೆಯೇ? ಬಿಜೆಪಿ ಸರಕಾರವಿರುವಾಗಲೇ ಗಝೆಟೆಡ್ ನೋಟಿಫಿಕೇಷನ್ ಹೊರಡಿಸಲಾಗಿತ್ತು. ಆದರೆ ಇದೀಗ ಅದೇ ಸರಕಾರ ಮಸ್ಜಿದ್ ಜಾಗವನ್ನು ಮರಳಿ ಪಡೆದುಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿ ನಾವು ಕಾನೂನು ಹೋರಾಟದ ಅವಕಾಶದ ಕುರಿತು ಪರಿಶೀಲಿಸುತ್ತಿದ್ದೇವೆ” ಎಂದು ಕಲ್ಮತ್ ಮಸ್ಜಿದ್ ಅಧ್ಯಕ್ಷರಾದ ಉಸ್ಮಾನ್ ಸಾಹೇಬ್ ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version