Home ಟಾಪ್ ಸುದ್ದಿಗಳು ಚಾಮರಾಜನಗರ ಆಕ್ಸೀಜನ್ ದುರ್ಘಟನೆ ತಪ್ಪಿತಸ್ಥರ ವಿರುದ್ಧ ಕ್ರಮ ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸಿ : ಎಸ್.ಡಿ.ಪಿ.ಐ...

ಚಾಮರಾಜನಗರ ಆಕ್ಸೀಜನ್ ದುರ್ಘಟನೆ ತಪ್ಪಿತಸ್ಥರ ವಿರುದ್ಧ ಕ್ರಮ ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸಿ : ಎಸ್.ಡಿ.ಪಿ.ಐ ಆಗ್ರಹ

ಬೆಂಗಳೂರು: ಚಾಮರಾಜನಗರ ಆಕ್ಸೀಜನ್ ದುರ್ಘಟನೆಯ ತಪ್ಪಿತಸ್ಥರ ವಿರುದ್ಧ ಕ್ರಮ ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಬ್ರಾರ್ ಆಹಮದ್ ಆಗ್ರಹಿಸಿದ್ದಾರೆ.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೇ 2 ರ ರಾತ್ರಿ ಆಕ್ಸೀಜನ್ ಪೊರೈಕೆ ಕೊರತೆಯಿಂದ ನಡೆದ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಸಾವಿಗೀಡಾಗಿದವರ ಕುಟುಂಬಸ್ಥರಿಗೆ ಪರಿಹಾರ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿ ಅದೇ ದಿನ ಜಿಲ್ಲಾ ಆಸ್ಪತ್ರೆಯ ಮುಂಭಾಗ ಎಸ್.ಡಿ.ಪಿ.ಐ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು.


ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಮೂರ್ತಿ ವೇಣುಗೋಪಾಲ್ ರವರು ತಮ್ಮ ಪ್ರಾಥಮಿಕ ತನಿಖಾ ವರದಿಯಲ್ಲಿ ಘಟನೆಗೆ ಆಕ್ಸೀಜನ್ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಈ ಘಟನೆಯಲ್ಲಿ 36 ಮಂದಿ ಮೃತರಾಗಿರುತ್ತಾರೆ ಎಂದು ತಿಳಿಸಿರುತ್ತಾರೆ. ಅಲ್ಲದೇ ಮುಂಚಿತವಾಗಿ ಅಗತ್ಯಕ್ಕೆ ಅನುಸಾರವಾಗಿ ಜಿಲ್ಲಾಡಳಿತ ಆಕ್ಸೀಜನ್ ತರಿಸುವುದರಲ್ಲಿ ವಿಫಲವಾಗಿದೆ. ಘಟನೆಯ ನಂತರ ದಾಖಲೆಗಳನ್ನು ತಿರುಚಲಾಗಿದೆ ಎಂದು ಗಂಭೀರವಾದ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಹಳ ಮುಖ್ಯವಾಗಿ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಾರ್ಯ ವೈಖರಿ ಕುರಿತು ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ. ಇಷ್ಟು ಇದ್ದರೂ ಸಹ ಸರ್ಕಾರ ಇಲ್ಲಿಯವರೆಗೂ ಒಬ್ಬನೇ ಒಬ್ಬ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿಲ್ಲ. ಕ್ರಮ ಇರಲಿ ನೈತಿಕ ಹೊಣೆ ಹೊತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ್ ರವರು ರಾಜೀನಾಮೆ ನೀಡಿಲ್ಲ, ಕೇವಲ 24 ಸಂತ್ರಸ್ತರಿಗೆ ಮಾತ್ರ ಸರ್ಕಾರ ತಲಾ 2 ಲಕ್ಷ ಪರಿಹಾರ ನೀಡಿ ಮೌನಕ್ಕೆ ಶರಣಾಗಿದೆ. ಇದು ಅತ್ಯಂತ ಅವಮಾನವೀಯ ಎಂದು ಕಿಡಿಕಾರಿದರು.


ಸರ್ಕಾರ ತಕ್ಷಣ ತನ್ನ ಮೌನವನ್ನು ಮುರಿದು ಜಿಲ್ಲಾ ಉಸ್ತುವಾರಿ ಸಚಿವರ ರಾಜೀನಾಮೆ ಪಡೆದು ಚಾಮರಾಜನಗರ ಜಿಲ್ಲಾಧಿಕಾರಿಗಳು ಸೇರಿದಂತೆ ಘಟನೆಗೆ ಕಾರಣಕಾರ್ತರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸ ಬೇಕು ಹಾಗೂ ಸಂತ್ರಸ್ತರ ಕುಟುಂಬ ಒಂದಕ್ಕೆ ರೂ. 50 ಲಕ್ಷ ಪರಿಹಾರ ನೀಡ ಬೇಕು ಎಂದು ಆಗ್ರಹಿಸಿದರು. ಎಸ್.ಡಿ.ಪಿ.ಐ ತನ್ನ ಹೋರಾಟ ಮುಂದುವರಿಸಲಿದೆ ಹಾಗೂ ಇಂದಿನ ಈ ಸುದ್ದಿಗೋಷ್ಠಿಯು ಹೋರಾಟದ ಮುಂದುವರಿದ ಭಾಗವಾಗಿದ್ದು, ಸರ್ಕಾರ ಎಚ್ಚೆತ್ತು ಕೊಂಡು ತಕ್ಷಣ ಸಕರಾತ್ಮಕವಾಗಿ ಸ್ಪಂದಿಸದಿದ್ದರೆ ಖಂಡಿತವಾಗಿಯೂ ನಮ್ಮ ಪಕ್ಷದ ವತಿಯಿಂದ ನಿರಂತರವಾಗಿ ವಿವಿಧ ಮಾದರಿಯ ಹೋರಾಟಗಳನ್ನು ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಾಮರಾಜನಗರ ಎಸ್.ಡಿ.ಪಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಸಂತ್ರಸ್ತರಲ್ಲಿ ಶೇಕಡ 50 ಕ್ಕಿಂತ ಹೆಚ್ಚು ಎಸ್.ಸಿ/ಎಸ್.ಟಿ ಸಮುದಾಯದವರು ಇದ್ದಾರೆ. ಆದುದರಿಂದ ಸಂತ್ರಸ್ತರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡ ಬೇಕು ಎಂದು ಆಗ್ರಹಿಸಿದರು.

ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಅಕ್ರಮ್ ಹಸನ್, ಜಿಲ್ಲಾಧ್ಯಕ್ಷರಾದ ಕಲೀಲ್ ಉಲ್ಲಾ, ಪ್ರತ್ಯಕ್ಷ ದರ್ಶಿ ರಾಜೇಂದ್ರ ಬಾಬು ಮತ್ತು ಸಂತ್ರಸ್ತರು ಉಪಸ್ಥಿತಿರಿದ್ದರು.

Join Whatsapp
Exit mobile version