Home ಟಾಪ್ ಸುದ್ದಿಗಳು ಕೇಂದ್ರ ಸರ್ಕಾರಕ್ಕಿಂತಲೂ ಮೊದಲೇ ರಾಜ್ಯದಲ್ಲಿ ಸ್ಟಾರ್ಟಪ್ ನೀತಿ ಆರಂಭವಾಗಿತ್ತು: ಟೆಕ್ ಸಮ್ಮಿಟ್ ನಲ್ಲಿ ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರಕ್ಕಿಂತಲೂ ಮೊದಲೇ ರಾಜ್ಯದಲ್ಲಿ ಸ್ಟಾರ್ಟಪ್ ನೀತಿ ಆರಂಭವಾಗಿತ್ತು: ಟೆಕ್ ಸಮ್ಮಿಟ್ ನಲ್ಲಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಸರ್ಕಾರಕ್ಕಿಂತಲೂ ಮೊದಲೇ ಕರ್ನಾಟರದಲ್ಲಿ 2015ರಲ್ಲಿ ನಮ್ಮ ರಾಜ್ಯ ಸರ್ಕಾರ ಸ್ಟಾರ್ಟಪ್ ನೀತಿಯನ್ನು ಪ್ರಾರಂಭಿಸುವ ಮೂಲಕ ದೂರದೃಷ್ಟಿಯ ಹೆಜ್ಜೆಯನ್ನು ಇಟ್ಟಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ನಗರದ ಅರಮನೆಯಲ್ಲಿ ಇಂದು ಆಯೋಜಿಸಿರುವ 26ನೇ ಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟಿಸಿ ಮಾತನಾಡಿದ ಅವರು, ಐಟಿ ಲ್ಯಾಂಡ್ಸ್ಕೇಪ್ನಲ್ಲಿ ಕರ್ನಾಟಕದ ಪ್ರಭಾವ ಅಸಾಧಾರಣವಾದದ್ದು. 5,500 ಐಟಿ/ಐಟಿಇಎಸ್ ಕಂಪನಿಗಳು ಮತ್ತು ಸರಿಸುಮಾರು 750 ಬಹುರಾಷ್ಟ್ರೀಯ ಸಂಸ್ಥೆಗಳಿಗೆ ನಮ್ಮ ರಾಜ್ಯ ನೆಲೆಯಾಗಿದೆ. ರಾಷ್ಟ್ರದ ರಫ್ತಿನಲ್ಲಿ ಸುಮಾರು 85 ಬಿಲಿಯನ್ ಯುಎಸ್ ಡಾಲರ್ನಷ್ಟು ಕೊಡುಗೆ ನೀಡಿದೆ. 12 ಲಕ್ಷಕ್ಕೂ ಹೆಚ್ಚು ವೃತ್ತಿಪರರಿಗೆ ನೇರ ಉದ್ಯೋಗ ಒದಗಿಸುವ ಜೊತೆಗೆ 31 ಲಕ್ಷಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ದೇಶದ ಸಾಫ್ಟ್ವೇರ್ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ 40ರಷ್ಟಿದೆ. ಇದು ಜಾಗತಿಕ ಐಟಿ ಪವರ್ಹೌಸ್ ಆಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತದೆ ಎಂದು ಐಟಿ ಕ್ಷೇತ್ರದಲ್ಲಿ ರಾಜ್ಯದ ಸಾಧನೆ ಮತ್ತು ಸರ್ಕಾರದ ಸಹಕಾರವನ್ನು ಸಿಎಂ ವಿವರಿಸಿದರು.


ಇನ್ನು ಕರ್ನಾಟಕ ಸರ್ಕಾರದ ವಾರ್ಷಿಕ ಜಾಗತಿಕ ಬೆಂಗಳೂರು ಟೆಕ್ ಶೃಂಗಸಭೆ (ಬಿಟಿಎಸ್) ಇಂದಿನಿಂದ ಆರಂಭವಾಗಿದ್ದು, 30ಕ್ಕೂ ಹೆಚ್ಚು ದೇಶಗಳ ಟೆಕ್ ನಾಯಕರು, ಸ್ಟಾರ್ಟಪ್‌ಗಳು, ಹೂಡಿಕೆದಾರರು ಮತ್ತು ಸಂಶೋಧನಾ ಪ್ರಯೋಗಾಲಯಗಳನ್ನು ಭಾಗವಹಿಸಿವೆ. ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಕೇಂದ್ರ ಸರ್ಕಾರದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದೊಂದಿಗೆ ಆಯೋಜಿಸಿರುವ ಮೂರು ದಿನಗಳ 26 ನೇ ಬಿಟಿಎಸ್ ‘ಬ್ರೇಕಿಂಗ್ ಬೌಂಡರೀಸ್’ ಥೀಮ್‌ನೊಂದಿಗೆ ನಡೆಯುತ್ತಿದೆ.

Join Whatsapp
Exit mobile version