ಬೆಂಗಳೂರು: ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ತಕ್ಷಣಕ್ಕೆ ಜನಸಾಮಾನ್ಯರಿಗೆ ಯಾವುದೇ ಅನುಕೂಲಗಳನ್ನು ಒದಗಿಸದ ದೂರದ ಬೆಟ್ಟ ನುಣ್ಣಗೆ ಎಂಬಂತೆ ಮುಂದೆ ಏನೋ ಮಾಡುತ್ತೇವೆ ಎಂಬ ಭರವಸೆಗಳಿಂದ ತುಂಬಿದೆ. ಅಲ್ಪಸಂಖ್ಯಾತರಿಗೆ 10,000 ಕೋಟಿ ರೂಪಾಯಿಗಳ ಬಜೆಟ್ ನೀಡುವುದಾಗಿ ಬಡಾಯಿ ಭಾಷಣ ಮಾಡಿದ್ದ ಸಿದ್ದರಾಮಯ್ಯನವರು ಅದರ 10% ಅಷ್ಟು ಕೂಡ ನೀಡದೆ ಮಾತು ತಪ್ಪಿದ್ದಾರೆ. ಇನ್ನು ದಲಿತರ ವಿಶೇಷ ಅನುದಾನದಿಂದ ಸುಮಾರು 11,500 ಕೋಟಿ ರೂಪಾಯಿಗಳನ್ನು ಕಳೆದ ವರ್ಷದ ಗ್ಯಾರಂಟಿಗಳಿಗೆ ಬಳಸಿಕೊಂಡಿದ್ದಕ್ಕೆ ಪ್ರತಿಯಾಗಿ ಏನನ್ನೂ ನೀಡದೆ ಪ್ರತಿಸಲದಂತೆ ಈ ಬಾರಿಯೂ ಮೂಗಿಗೆ ತುಪ್ಪ ಸವರಿ ಸುಮ್ಮನಾಗಿದ್ದರೆ. ಒಟ್ಟಿನಲ್ಲಿ ಇದು ಬಜೆಟ್ ಅಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಸರ್ಕಾರ ಹೆಣೆದಿರುವ ಬಲೆ ಅಷ್ಟೇ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಬಜೆಟ್ ನಲ್ಲಿ 10,000 ಕೋಟಿ ನೀಡುವುದಾಗಿ ಮುಸ್ಲಿಮರ ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಮುಸ್ಲಿಮರ ಕುರಿತು ಕೀಳು ಮಟ್ಟದ ಹೇಳಿಕಗಳನ್ನು ನೀಡಿತ್ತು. ಈಗ ಬಜೆಟ್ ನಲ್ಲಿ ಅದನ್ನು ಸಿದ್ದರಾಮಯ್ಯ ಮರೆತಿದ್ದಾರೆ. ಬಜೆಟ್ ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಿರುವ ಅನುದಾನಗಳನ್ನು ಒಟ್ಟು ಮಾಡಿದರೆ ಒಂದು ಸಾವಿರ ಕೋಟಿ ದಾಟುವುದಿಲ್ಲ. ಅಂದು ಕಾಂಗ್ರೆಸ್ ಚಪ್ಪಾಳೆ ಗಿಟ್ಟಿಸಿಕೊಂಡಿತು. ಬಿಜೆಪಿ ತನ್ನ ನಾಲಿಗೆ ಚಪಲ ತೀರಿಸಿಕೊಂಡಿತ್ತು. ಆದರೆ ಮುಸ್ಲಿಂ ಸಮುದಾಯಕ್ಕೆ ಟೀಕೆ, ಬೈಗುಳ ಬಿಟ್ಟು ಬೇರೇನೂ ಸಿಗಲಿಲ್ಲ ಎಂದು ಮಜೀದ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬ ಬೇಡಿಕೆ ಸಾಕಷ್ಟು ಸಮಯದಿಂದ ಇದೆ. ಈ ಬಾರಿಯ ಬಜೆಟ್ ನಲ್ಲೂ ಆ ಬೇಡಿಕೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಸುಮಾರು 21 ಲಕ್ಷ ಜನಸಂಖ್ಯೆಯ ಜಿಲ್ಲೆಗೆ ಒಂದೇ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲದೆ ಇರುವುದು ದುರಂತ ಎಂದು ತಿಳಿಸಿದ್ದಾರೆ.
ಇಂದು ಸಿದ್ದರಾಮಯ್ಯನವರು ಬಜೆಟ್ ನಲ್ಲಿ ಘೋಷಣೆ ಮಾಡಿದ ಯೋಜನೆಗಳಲ್ಲಿ, ಅದು ನೀರಾವರಿ ಯೋಜನೆಗಳಿರಬಹುದು, ಕೃಷಿ ಸಂಬಂಧಿತ ಯೋಜನೆಗಳಿರಬಹುದು, ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಭರವಸೆಗಳಿರಬಹುದು. ಇವುಗಳಲ್ಲಿ ಬಹುಪಾಲು ಯೋಜನೆಗಳು ತಕ್ಷಣಕ್ಕೆ ಜಾರಿಗೆ ಬರುವಂತವಲ್ಲ. ಇವೆಲ್ಲ ಕನಿಷ್ಠವೆಂದರೂ ಎರಡು ಮೂರು ವರ್ಷಗಳ ನಂತರ ಅನುಷ್ಠಾನಕ್ಕೆ ಬರಬಹುದು. ಇದು ತಕ್ಷಣಕ್ಕೆ ಜನರನ್ನು ಸಮಾಧಾನ ಪಡಿಸಲು ಮಾಡಿರುವ ಸರ್ಕಸ್ ಎಂದು ಎಂಥವರಿಗೂ ತಿಳಿಯುತ್ತದೆ ಎಂದು.ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯ ಬಜೆಟನ್ನು ಟೀಕಿಸಿದ್ದಾರೆ.
ಬಹಳ ಸಮಯದಿಂದ ತಮ್ಮ ಬೇಡಿಕೆಗಳನ್ನು ಹೊತ್ತು ನಿರಂತರವಾಗಿ ಹೋರಾಡುತ್ತಾ ಬಂದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ಪ್ರಮುಖ ಬೇಡಿಕೆಯಾದ ವೇತನ ಹೆಚ್ಚಳದ ಬಗ್ಗೆ ಈ ಬಾರಿಯ ಬಜೆಟ್ ನಲ್ಲೂ ಯಾವುದೇ ಭರವಸೆ ಸಿಕ್ಕಿಲ್ಲ. ಪೌರ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕ ವಲಯಕ್ಕೆ ಯಾವುದೇ ವಿಶೇಷ ಯೋಜನೆಗಳನ್ನು ರೂಪಿಸದೆ ಸರ್ಕಾರ ಅವರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರದ ಮೋದಿ ಸರ್ಕಾರದ ನೀತಿಗಳಿಂದ ಬೇಸತ್ತು ಬೃಹತ್ ಪ್ರತಿಭಟನೆಯ ಮಾರ್ಗ ಹಿಡಿದಿರುವ ರೈತ ಸಮುದಾಯ ರಾಜ್ಯ ಬಜೆಟ್ ಕಡೆ ಆಸೆಗಣ್ಣಿನಿಂದ ನೋಡುತ್ತಿತ್ತು. ಆದರೆ ಅವರಿಗೆ ಹೊಸತು ಅಥವಾ ಉತ್ತೇಜನೆ ನೀಡಬಹುದು ಎಂದು ಹೇಳಬಹುದಾದ ಒಂದೇ ಒಂದು ಯೋಜನೆಯೂ ಈ ಬಜೆಟ್ ನಲ್ಲಿ ಕಂಡುಬರುವುದಿಲ್ಲ. ಈ ಬಜೆಟ್ ನೋಡಿದರೆ ರೈತರನ್ನು ವಂಚಿಸಲು ಸಿದ್ದರಾಮಯ್ಯನವರ ಸರ್ಕಾರ ಮೋದಿ ಸರ್ಕಾರದೊಂದಿಗೆ ಕೈಜೋಡಿಸಿದಂತೆ ಭಾಸವಾಗುತ್ತದೆ ಎಂದು ಕಿಡಿ ಕಾರಿದ್ದಾರೆ.
ಚುನಾವಣೆ ಹೊಸ್ತಿಲಲ್ಲಿ ಜನರಿಗೆ ಉದ್ದುದ್ದ ಭಾಷಣದ ನಿರೂಪಯೋಗಿ ಬಜೆಟ್ ನೀಡಲಾಗಿದೆ. ಇದನ್ನು ಜನ ಅರ್ಥ ಮಾಡಿಕೊಳ್ಳಲಾರರು ಎಂದು ಕಾಂಗ್ರೆಸ್ ಸರ್ಕಾರ ಭಾವಿಸಿದಂತಿದೆ. ಆದರೆ ಜನ ಚುನಾವಣೆಯಲ್ಲಿ ಇದಕ್ಕೆ ಪ್ರತ್ಯತ್ತರ ನೀಡಲು ಮರೆಯುವುದಿಲ್ಲ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.