ಬೆಂಗಳೂರು: ಹೆಬ್ಬಗೋಡಿ ಬಳಿಯ ಕಮ್ಮಸಂದ್ರದ ಡ್ಯಾಡೀಸ್ ಬಡಾವಣೆಯ ಗಾರ್ಡನ್ ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ ಕೆಳಗೆ ಹಾರಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಬೇಗೂರು ಟ್ರಮೀಸ್ ಶಾಲೆಯ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ ಪಾಟೀಲ್ ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.
ವೈದ್ಯ ಶರಣು ಪಾಟೀಲ್ ಮತ್ತು ಮಮತಾರ ಮುದ್ದಿನ ಏಕೈಕ ಮಗನಾಗಿದ್ದ. ಶರಣು ಪಾಟೀಲ್ ಮತ್ತು ಮಮತಾ ನಾರಾಯಣ ಹೆಲ್ತ್ ಸಿಟಿಯ ಸ್ಪರ್ಶ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞನಾಗಿದ್ದರು.
ಕಳೆದ ತಿಂಗಳಿನಿಂದ ಮೊಬೈಲನ್ನೇ ನೋಡುತ್ತಾ ಇರುತ್ತಿದ್ದ. ಮೊಬೈಲ್ ಇಲ್ಲದೆ ಮನೆ ಬಿಟ್ಟು ಹೆಚ್ಚು ಆಚೆಗೆ ಬರುತ್ತಿರಲಿಲ್ಲ. ಫುಟ್ಬಾಲ್ ಆಟಗಾರನಾಗಿದ್ದ ಆತ ತಿಂಗಳಿಂದ ಯಾರೊಂದಿಗೂ ಬೆರೆಯುತ್ತಿರಲಿಲ್ಲವೆಂದು ಗೆಳೆಯರು ತಿಳಿಸಿದ್ದಾರೆ.
ಮನೆ ಮುಂದಿನ ಶರವಣ ಬಿಲ್ಡಿಂಗ್ನ 5ನೇ ಅಂತಸ್ತಿನಿಂದ ಕೆಳಗೆ ಹಾರಿದ ಪರಿಣಾಮ ತಲೆ ಒಡೆದು ಮಿದುಳು ಹೊರಗೆ ಚಿಮ್ಮಿದ್ದು, ಸುತ್ತಲ ಅಪಾರ್ಟ್ಮೆಂಟ್ ವಾಸಿಗಳಿಗೆ ಗಾಬರಿ ಹುಟ್ಟಿಸಿದೆ. ಕಳೆದ ಮೂರು ದಿನಗಳಿಂದ 10ನೇ ತರಗತಿಯ ಪರೀಕ್ಷೆ ನಡೆಯುತ್ತಿದೆ. ನಿನ್ನೆಯಷ್ಟೇ ಪರೀಕ್ಷೆಗೆ ಹಾಜರಾಗಿದ್ದ. ಮಂಗಳವಾರ ಅರ್ಧ ಗಂಟೆಯಿಂದ ನಾಪತ್ತೆಯಾಗಿದ್ದ.
ಹುಡುಗನಿಗಾಗಿ ಹುಡುಕಾಟ ನಡೆಸುವಷ್ಟರಲ್ಲಿ ಮನೆ ಮುಂದಿನ ಎತ್ತರದ ಅಪಾರ್ಟ್ಮೆಂಟ್ ಕಟ್ಟಡದ ಮೇಲೆ ಹತ್ತಿ ಕೆಳಗೆ ಹಾರಿದ್ದಾನೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.