Home ಕ್ರೀಡೆ ಏಷ್ಯಾ ಕಪ್‌ | ಬಾಂಗ್ಲಾದೇಶವನ್ನು ಮಣಿಸಿ ಸೂಪರ್‌-4 ಹಂತ ಪ್ರವೇಶಿಸಿದ ಶ್ರೀಲಂಕಾ

ಏಷ್ಯಾ ಕಪ್‌ | ಬಾಂಗ್ಲಾದೇಶವನ್ನು ಮಣಿಸಿ ಸೂಪರ್‌-4 ಹಂತ ಪ್ರವೇಶಿಸಿದ ಶ್ರೀಲಂಕಾ

ಅಂತಿಮ ಓವರ್‌ವರೆಗೂ ಕುತೂಹಲ ಕೆರಳಿಸಿದ್ದ ʻ ಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ ಕೊನೆಗೂ ಗೆಲುವಿನ ನಗೆ ಬೀರಿದೆ. ಆ ಮೂಲಕ ಬಿ ಗುಂಪಿನಿಂದ ಎರಡನೇ ತಂಡವಾಗಿ ಸೂಪರ್‌ -4 ಹಂತವನ್ನು ಪ್ರವೇಶಿಸಿದೆ. ಬಾಂಗ್ಲಾದೇಶದ ಏಷ್ಯಾಕಪ್‌ -2022 ಅಭಿಯಾನ ಅಂತ್ಯವಾಗಿದೆ.

ಬಾಂಗ್ಲಾದೇಶ ತಂಡ ನೀಡಿದ್ದ 184ರನ್‌ಗಳ ಸವಾಲಿನ ಗುರಿಯನ್ನು ಶ್ರೀಲಂಕಾ, 19.2 ಓವರ್‌ಗಳಲ್ಲಿ8 ವಿಕೆಟ್‌ ನಷ್ಟದಲ್ಲಿ ತಲುಪಿತು. ಅಂತಿಮ ಎರಡು ಓವರ್‌ಗಳಲ್ಲಿ ಲಂಕಾ ಗೆಲುವಿಗೆ 25 ರನ್‌ಗಳ ಆಗತ್ಯವಿತ್ತು. 19ನೇ ಓವರ್‌ ಎಸೆದ ಇಬಾದತ್‌ ಹುಸೇನ್‌ 17 ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಹೀಗಾಗಿ ಕೊನೆಯ ಆರು ಎಸೆತಗಳಲ್ಲಿ 8 ರನ್‌ ಗುರಿ ಮುಂದಿತ್ತು. ಆದರೆ ಮೆಹ್ದಿ ಹಸನ್‌ ನಿರ್ಣಾಯಕ ಘಟ್ಟದಲ್ಲಿ ನೋಬಾಲ್‌ ಎಸೆಯುವ ಮೂಲಕ ಲಂಕಾ ಗೆಲುವನ್ನು ಸುಲಭವಾಗಿಸಿದರು.

ಶ್ರೀಲಂಕಾ ಪರ ಆರಂಭಿಕನಾಗಿ ಮೈದಾನಕ್ಕಿಳಿದ  ವಿಕೆಟ್‌ ಕೀಪರ್‌ ಕುಸಾಲ್‌ ಮೆಂಡಿಸ್‌ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಮಿಂಚಿದರು. 37 ಎಸೆತಗಳನ್ನು ಎದುರಿಸಿದ ಮೆಂಡಿಸ್‌, 3 ಸಿಕ್ಸರ್‌ ಮತ್ತು 4 ಬೌಂಡರಿಗಳ ನೆರವಿನಿಂದ 60 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಬಳಿಕ ನಾಯಕನ ಜವಾಬ್ಧಾರಿ ಅರಿತು ಬ್ಯಾಟ್‌ ಬೀಸಿದ  ದಾಸುನ್‌ ಶನಕ 45 ರನ್‌ಗಳಿಸಿದರು.  ಕೊನೆಯಲ್ಲಿ ಅಸಿತಾ ಫೆರ್ನಾಂಡಿಸ್‌, 3 ಎಸೆತಗಳಲ್ಲಿ 2 ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ದಾಟಿಸಿದರು.

ಏಷ್ಯಾ ಕಪ್‌ ಟೂರ್ನಿಯ ಬಿ ಗುಂಪಿನಿಂದ ಈಗಾಗಲೇ ಅಫ್ಘಾನಿಸ್ತಾನ ಸೂಪರ್‌-4 ಹಂತಕ್ಕೆ ತೇರ್ಗಡೆಯಾಗಿದ್ದು, ಇದೀಗ ಎರಡನೇ ತಂಡವಾಗಿ ಶ್ರೀಲಂಕಾ ಸ್ಥಾನ ಪಡೆದುಕೊಂಡಿದೆ.

ಶ್ರೀಲಂಕಾ ಗೆಲುವಿಗೆ 184 ರನ್‌ ಗುರಿ

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟ್‌ ಮಾಡಿದ್ದ ಬಾಂಗ್ಲಾದೇಶ 7 ವಿಕೆಟ್‌ ನಷ್ಟದಲ್ಲಿ 183 ರನ್‌ಗಳಿಸಿತ್ತು

ಆರಂಭಿಕ ಮೆಹ್ದಿ ಹಸನ್ ಮಿರಾಝ್‌ (38 ರನ್‌), ನಾಯಕ  ಶಾಕಿಬ್ ಅಲ್ ಹಸನ್ (24 ರನ್‌),  ಅಫೀಫ್ ಹುಸೇನ್ (39 ರನ್‌) ಮಹ್ಮೂದುಲ್ಲಾ(27 ರನ್‌), ಹಾಗೂ ಮೊಸದ್ದೆಕ್ ಹುಸೈನ್ 24 ರನ್‌ ಗಳಿಸುವ ಮೂಲಕ  ತಂಡವು ಸ್ಪರ್ಧಾತ್ಮ ಮೊತ್ತ ಕಲೆಹಾಕುವಲ್ಲಿ ನೆರವಾದರು. ಅದರಲ್ಲೂ ಕೊನೆ ಕ್ಷಣದಲ್ಲಿ ಅಬ್ಬರಿಸಿದ ಮೊಸದ್ದೆಕ್ ಹುಸೈನ್, ಕೇವಲ 9 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 24 ರನ್‌ಗಳಿಸಿ ಅಜೇಯರಾಗುಳಿದರು.

ಶ್ರೀಲಂಕಾ ಪರ ಬೌಲಿಂಗ್‌ನಲ್ಲಿ ವನಿಂದು ಹಸರಂಗ ಮತ್ತು ಚಾಮಿಕ ಕರುಣಾರತ್ನೆ ತಲಾ ಎರಡು ವಿಕೆಟ್‌ ಪಡೆದರೆ, ಉಳಿದ ಮೂವರು ಬೌಲರ್‌ಗಳು ತಲಾ ಒಂದು ವಿಕೆಟ್‌ ಪಡೆದರು.

ಬುಧವಾರ ನಡೆದ ಪಂದ್ಯದಲ್ಲಿ ಹಾಂಕಾಂಗ್‌ ತಂಡವನ್ನು 40 ರನ್‌ಗಳ ಅಂತರದಲ್ಲಿ ಮಣಿಸಿದ್ದ ಟೀಮ್‌ ಇಂಡಿಯಾ ಸೂಪರ್‌-4 ಹಂತಕ್ಕೆ ಪ್ರವೇಶ ಪಡೆದಿದೆ. ಸೆಪ್ಟಂಬರ್‌ 2 ಶುಕ್ರವಾರದಂದು ನಡೆಯುವ ಪಾಕಿಸ್ತಾನ-ಹಾಂಕಾಂಗ್‌ ಪಂದ್ಯದ ವಿಜೇತರು ಎರಡನೇ ತಂಡವಾಗಿ ಸೂಪರ್‌-4 ಹಂತಕ್ಕೆ ಅವಕಾಶ ಪಡೆಯಲಿದ್ದಾರೆ. ಸೆಪ್ಟಂಬರ್‌ 4ರಿಂದ ಸೂಪರ್‌-4 ಹಂತದ ಪಂದ್ಯಗಳು ನಡೆಯಲಿದ್ದು, ಸೆಪ್ಟಂಬರ್‌ 11ರಂದು ಫೈನಲ್‌ ಪಂದ್ಯ ನಡೆಯಲಿದೆ.  

Join Whatsapp
Exit mobile version