►ಸುನೀಲ್ ಬಜಿಲಕೇರಿ ಹಮ್ಮಿಕೊಂಡ ಈ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಬಹುದು
ಮಂಗಳೂರು: ನಗರದ ಸಮಸ್ಯೆಗಳನ್ನು ಬೆಳಕಿಗೆ ತರಲು ವಿಡಂಬನಾತ್ಮಕ ಸ್ಪರ್ಧೆಯನ್ನು ಸುನೀಲ್ ಬಜಿಲಕೇರಿ ಹಮ್ಮಿಕೊಂಡಿದ್ದಾರೆ. ನಗರದ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲು ಈ ಸ್ಪರ್ಧೆಯೊಂದನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಸಮಸ್ಯೆ ಪೋಸ್ಟ್ ಮಾಡಿದವರಿಗೆ ಬಹುಮಾನ ಸಿಗಲಿದೆ ಎಂದು ಹೇಳಿದ್ದಾರೆ .
ನಗರ ವ್ಯಾಪ್ತಿಯಲ್ಲಿ ಸಮಸ್ಯೆ ಇರುವ ರಸ್ತೆ, ತೋಡು, ಒಳಚರಂಡಿ ಇತ್ಯಾದಿ ಯಾವುದೇ ಸಮಸ್ಯೆ ಇದ್ದರೂ ಅದರ ಬಗ್ಗೆ ಮೂರು ನಿಮಿಷಗಳ ವಿಡಿಯೊ ಮಾಡಿ, ನಿಮ್ಮ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಂನಲ್ಲಿ ಹಾಕಬೇಕು.
ವೈಯಕ್ತಿಕವಾಗಿ ಪೋಸ್ಟ್ ಮಾಡಿದಾಗ, ಅದನ್ನು ವೈಯಕ್ತಿಕ ಸ್ಪರ್ಧೆ ಎಂದು ಪರಿಗಣಿಸಲಾಗುವುದು. ಊರಿನವರು, ಸಂಸ್ಥೆ, ಗುಂಪಿನವರು ಭಾಗವಹಿಸಿದಾಗ ಅದನ್ನು ಗುಂಪು ಸ್ಪರ್ಧೆಯಲ್ಲಿ ಪರಿಗಣಿಸಲಾಗುವುದು. ಯಾರ ಪೋಸ್ಟ್‌ಗೆ ಹೆಚ್ಚು ಲೈಕ್ ಬಂದಿದೆಯೋ ಅವರಿಗೆ ಈ ಎರಡು ಪ್ರಶಸ್ತಿ ನೀಡಲಾಗುವುದು. ಯಾವುದೇ ವ್ಯಕ್ತಿ ನಿಂದನೆ, ಜಾತಿನಿಂದನೆ ಮಾಡಬಾರದು ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಸ್ಪರ್ಧೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಿಗೆ ಸೀಮಿತವಾಗಿದೆ. ಒಂದು ವಾರದಲ್ಲಿ ಯಾರ ಪೋಸ್ಟ್‌ಗೆ ಹೆಚ್ಚು ಲೈಕ್ ಬಂದಿದೆ ಎಂಬುದನ್ನು ಪರಿಗಣಿಸಿ ಗುಂಪು ಸ್ಪರ್ಧೆಗೆ ಪ್ರಥಮ 10 ಸಾವಿರ, ದ್ವಿತೀಯ 5,000, ವೈಯಕ್ತಿಕ ಪ್ರಥಮ 5,000, ದ್ವಿತೀಯ 2,500 ಬಹುಮಾನ ನೀಡಲಾಗುತ್ತದೆ.
ನಗರದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಯಾರೂ ಆ ಬಗ್ಗೆ ಗಟ್ಟಿ ಧ್ವನಿ ಎತ್ತುತ್ತಿಲ್ಲ. ಈ ಕಾರಣಕ್ಕೆ ಇಂಥದೊಂದು ಸ್ಪರ್ಧೆಯನ್ನು ಆಯೋಜಿಸಿ ಜನಜಾಗೃತಿ ಮೂಡಿಸುವುದು ಮತ್ತು ಊರಿನ ಅಭಿವೃದ್ಧಿಯಲ್ಲಿ ಜನರೂ ಭಾಗಿಯಾಗುವುದು ನಮ್ಮ ಪ್ರಮುಖ ಉದ್ದೇಶ ಎಂದು ಸುನಿಲ್ ಹೇಳಿದ್ದಾರೆ