ಲಕ್ನೋ: ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮೈನ್‌ಪುರಿಯ ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕರ್ಹಾಲ್ ಕ್ಷೇತ್ರವು ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿದ್ದು, ಈ ಕ್ಷೇತ್ರದಲ್ಲಿ ಅಖಿಲೇಶ್ ಸುಲಭ ಜಯ ಗಳಿಸುವ ಸಾಧ್ಯತೆಯಿದೆ. ಪ್ರಸ್ತುತ ಅಖಿಲೇಶ್ ಯಾದವ್ ಅಜಂಗಢ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.
ಅಖಿಲೇಶ್ ಯಾದವ್ ಮತ್ತೋರ್ವ ಸಂಬಂಧಿ ಬಿಜೆಪಿ ಸೇರ್ಪಡೆ
ಅಖಿಲೇಶ್ ಯಾದವ್ ಅವರ ನಾದಿನಿ ಅಪರ್ಣಾ ಯಾದವ್ ಬಿಜೆಪಿ ಪಾಳಯ ಸೇರಿದ ಬೆನ್ನಲ್ಲೇ ಮುಲಯಾಂ ಸಿಂಗ್ ಯಾದವ್ ಅವರ ಸೋದರ ಮಾವ ಪ್ರಮೋದ್ ಗುಪ್ತಾ ಕೂಡ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸಮಾಜವಾದಿ ಪಕ್ಷವನ್ನು ಗೂಂಡಾಗಳು ಕೈವಶ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಸೇರ್ಪಡೆಯ ಬಳಿಕ ಗುಪ್ತಾ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಗೆ ಧನ್ಯವಾದ ಸಲ್ಲಿಸಿದ ಅಖಿಲೇಶ್ ಯಾದವ್ !
24 ಗಂಟೆಗಳ ಅಂತರದಲ್ಲಿ ತಮ್ಮ ಕುಟುಂಬದ ಇಬ್ಬರು ಸದಸ್ಯರು ಬಿಜೆಪಿ ಸೇರಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್, ಬಿಜೆಪಿಗೆ ಧನ್ಯವಾದ ಎಂದಿದ್ದಾರೆ. ನಮ್ಮ ಮೇಲೆ ಕೇಳಿ ಬಂದಿದ್ದ ಕುಟುಂಬ ರಾಜಕಾರಣ ಆರೋಪವನ್ನು ಕೊನೆಗೊಳಿಸುತ್ತಿರುವುದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.