Home ಕರಾವಳಿ ಮುಸ್ಲಿಮ್ ಹೆಣ್ಣುಮಕ್ಕಳಿಗೆ ಸ್ಕಾರ್ಫ್ ನಿರಾಕರಿಸಿದ ಉಡುಪಿ ಸರಕಾರಿ ಕಾಲೇಜಿಗೆ ಒಂದು ವಾರ ರಜೆ ಘೋಷಣೆ !

ಮುಸ್ಲಿಮ್ ಹೆಣ್ಣುಮಕ್ಕಳಿಗೆ ಸ್ಕಾರ್ಫ್ ನಿರಾಕರಿಸಿದ ಉಡುಪಿ ಸರಕಾರಿ ಕಾಲೇಜಿಗೆ ಒಂದು ವಾರ ರಜೆ ಘೋಷಣೆ !

ಉಡುಪಿ : ಮುಸ್ಲಿಮ್ ಹೆಣ್ಣುಮಕ್ಕಳಿಗೆ ಸ್ಕಾರ್ಫ್ ಧರಿಸಿ ತರಗತಿ ಪ್ರವೇಶ ನಿರಾಕರಿಸಿದ ಉಡುಪಿ ಸರಕಾರಿ ಕಾಲೇಜಿಗೆ ಒಂದು ವಾರದ ಕಾಲ ರಜೆ ಘೋಷಿಸಲಾಗಿದೆ. ಕಾಲೇಜಿನ ವಾಟ್ಸಪ್ ಗ್ರೂಪಿನಲ್ಲಿ ಪ್ರಾಧ್ಯಾಪಕರೊಬ್ಬರು ಈ ಮಾಹಿತಿಯನ್ನು ಹಂಚಿಕೊಂಡಿದ್ದು, “ಕಾಲೇಜಿನ ವಿವಿಧ ವಿಭಾಗದ 6 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್ ವರದಿಯಾಗಿರುವುದರಿಂದ ಜನವರಿ 21ರಿಂದ 26 ರ ವರೆಗೆ ರಜೆ ಘೋಷಣೆ ಮಾಡಲಾಗಿದೆ” ಎಂದವರು ಸಂದೇಶ ಫಾರ್ವಾರ್ಡ್ ಮಾಡಿದ್ದಾರೆ.

ಕಾಲೇಜಿನಲ್ಲಿ ಸ್ಕಾರ್ಫ್ ಧಾರಣೆಯನ್ನು ವಿರೋಧಿಸಿ ಪ್ರಿನ್ಸಿಪಾಲ್ ರುದ್ರೇಶ್ ಗೌಡ ಮತ್ತು ಕಾಲೇಜು ಆಡಳಿತ ಮಂಡಳಿ ವಿವಾದ ಸೃಷ್ಟಿಸಿತ್ತು.   ಆ ಬಳಿಕ ಘಟನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಒತ್ತಡಕ್ಕೊಳಗಾಗಿದ್ದ ಕಾಲೇಜು ಮತ್ತು ಆಡಳಿತ ಮಂಡಳಿ ಇದೀಗ ಕೋವಿಡ್ ನೆಪವನ್ನೊಡ್ಡಿ ಕಾಲೇಜಿಗೆ ರಜೆ ಘೋಷಿಸಿದೆ ಎನ್ನಲಾಗಿದೆ.

ಕಾಲೇಜಿಗೆ ರಜೆ ಘೋಷಿಸಿರುವ ಕುರಿತು ಪ್ರತಿಕ್ರಿಯಿಸಿರುವ ಕೆಲ ಪೋಷಕರು, “ಇದೊಂದು ತಂತ್ರವಷ್ಟೇ, ತರಗತಿ ಬಹಿಷ್ಕಾರಕ್ಕೊಳಗಾಗಿರುವ ವಿದ್ಯಾರ್ಥಿಗಳ ಕುರಿತು ಆದಷ್ಟು ಶೀಘ್ರ ತೀರ್ಮಾನ ತೆಗೆದುಕೊಳ್ಳುವಂತೆ ಪ್ರಿನ್ಸಿಪಾಲರ ಮೇಲೆ ಅಲ್ಪಸಂಖ್ಯಾತ ಇಲಾಖೆಯಿಂದ ಒತ್ತಡವಿದೆ.  ಹೀಗಾಗಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಈ ರೀತಿಯ ರಜೆ ಘೋಷಣೆ ಮಾಡಲಾಗಿದೆ” ಎಂದು ದೂರಿದ್ದಾರೆ.    

Join Whatsapp
Exit mobile version