Home Uncategorized ಅಮಿತ್ ಶಾ ಪುತ್ರ ಇರಬಹುದಾದರೆ ಗಂಗೂಲಿ ಯಾಕೆ ಇರಬಾರದು ? : ಮಮತಾ ಬ್ಯಾನರ್ಜಿ ಪ್ರಶ್ನೆ

ಅಮಿತ್ ಶಾ ಪುತ್ರ ಇರಬಹುದಾದರೆ ಗಂಗೂಲಿ ಯಾಕೆ ಇರಬಾರದು ? : ಮಮತಾ ಬ್ಯಾನರ್ಜಿ ಪ್ರಶ್ನೆ

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಸೌರವ್‌ ಗಂಗೂಲಿ ಅವರನ್ನು ಕೆಳಗಿಳಿಸುತ್ತಿರುವ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಟೀಮ್‌ ಇಂಡಿಯಾ ಮಾಜಿ ನಾಯಕನ ಬೆಂಬಲಕ್ಕೆ ನಿಂತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಮತ್ತು ಗಂಗೂಲಿ ಅವರನ್ನು ಐಸಿಸಿ ಮುಖ್ಯಸ್ಥರನ್ನಾಗಿ ನಾಮನಿರ್ದೇಶನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, “ಸೌರವ್‌ ಗಂಗೂಲಿ ಮತ್ತು ಜಯ್‌ ಶಾ ಅಧಿಕಾರದಲ್ಲಿ ಮುಂದುವರಿಯಲು ಸುಪ್ರೀಕೋರ್ಟ್‌ ಹಸಿರು ನಿಶಾನೆ ತೋರಿಸಿದೆ. ಆದರೆ ಜಯ್‌ ಶಾ ಮಾತ್ರ ಮಂದುವರಿಯುತ್ತಿರುವುದು ಎಷ್ಟು ಸರಿ” ಎಂದು ಪ್ರಶ್ನಿಸಿರುವ ಸಿಎಂ ಮಮತಾ, “ಅಮಿತ್ ಶಾ ಅವರ ಪುತ್ರ ಮಂಡಳಿಯಲ್ಲಿ ಇರಬಹುದಾದರೆ, ಸೌರವ್ ಏಕೆ ಇರಬಾರದು” ಎಂದು ಕೇಳಿದ್ದಾರೆ. “ಗಂಗೂಲಿ ಬಂಗಾಳದ ಹೆಮ್ಮೆ. ನಾನು ಯಾರನ್ನೂ ಟೀಕಿಸುತ್ತಿಲ್ಲ. ಯಾರು ಉತ್ತಮ ಕೆಲಸ ಮಾಡುತ್ತಾರೋ ಅವರಿಗೆ ಮೆಚ್ಚುಗೆ ಸಿಗುತ್ತದೆ” ಎಂದು ಹೇಳಿದ್ದಾರೆ.

“ಬಿಸಿಸಿಐನಿಂದ ಹೊರಹಾಕಿದ ನಂತರ ಮಾಜಿ ನಾಯಕ ಗಂಗೂಲಿಗೆ ಐಸಿಸಿ ನಾಮನಿರ್ದೇಶನದ ಮೂಲಕ ಮಾತ್ರ ಪರಿಹಾರ ನೀಡಬಹುದು. ಗಂಗೂಲಿ ಐಸಿಸಿ ಮುಖ್ಯಸ್ಥರ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ನಾನು ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತೇನೆ” ಎಂದು ಮಮತಾ ಹೇಳಿದ್ದಾರೆ.

“ಸೌರವ್ ಗಂಗೂಲಿಯವರನ್ನು ಹೊರಗಿಡುತ್ತಿರುವುದು ವಂಚನೆ. ಅವರು ಮಾಡಿದ ತಪ್ಪಾದರೂ ಏನು? ಇದರಿಂದ ನನಗೆ ಬಹಳ ದುಃಖವಾಗಿದೆ. ಸೌರವ್ ಜನಪ್ರಿಯ ವ್ಯಕ್ತಿ. ಅವರು ಭಾರತ ತಂಡದ ನಾಯಕರಾಗಿದ್ದರು. ದೇಶಕ್ಕಾಗಿ ಬಹಳ ಕೊಡುಗೆ ನೀಡಿದ್ದಾರೆ. ಅವರು ಕೇವಲ ಬಂಗಾಳದ ಹೆಮ್ಮೆ ಮಾತ್ರವಲ್ಲ, ಇಡೀ ಭಾರತದ ಹೆಮ್ಮೆ. ಅವರನ್ನು ಅನ್ಯಾಯ ಮಾರ್ಗದಲ್ಲಿ ಹೊರಗಿಡುತ್ತಿರುವುದು ಏಕೆ?” ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version