Home ಟಾಪ್ ಸುದ್ದಿಗಳು ಸೋನಿಯಾಗೆ ವಿಚಾರಣೆ ನೆಪದಲ್ಲಿ ಇ.ಡಿ.ಕಿರುಕುಳ ಆರೋಪ: ಜುಲೈ 21ರಂದು ‘ರಾಜಭವನ ಮುತ್ತಿಗೆ; ಡಿ.ಕೆ.ಶಿವಕುಮಾರ್

ಸೋನಿಯಾಗೆ ವಿಚಾರಣೆ ನೆಪದಲ್ಲಿ ಇ.ಡಿ.ಕಿರುಕುಳ ಆರೋಪ: ಜುಲೈ 21ರಂದು ‘ರಾಜಭವನ ಮುತ್ತಿಗೆ; ಡಿ.ಕೆ.ಶಿವಕುಮಾರ್

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹೆಸರಲ್ಲಿ ಕೇಂದ್ರ ಸರ್ಕಾರವು ಸಂವಿಧಾನಿಕ ಸಂಸ್ಥೆ ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಲು ಮುಂದಾಗಿದೆ. ಇದನ್ನು ಖಂಡಿಸಿ ಬೆಂಗಳೂರಿನಲ್ಲಿ ಜುಲೈ 21 ರಂದು ‘ರಾಜಭವನ ಮುತ್ತಿಗೆ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 21ರಿಂದ ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಇದೇ ಸಮಯದಲ್ಲಿ ಸೋನಿಯಾ ಗಾಂಧಿಯವರಿಗೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುವ ಪ್ರಯತ್ನ ನಡೆಯುತ್ತಿದೆ. ಕಳೆದ ತಿಂಗಳು ಐದು ದಿನ 50 ಗಂಟೆಗಳ ಕಾಲ ರಾಹುಲ್ ಗಾಂಧಿ ಅವರಿಗೆ ವಿಚಾರಣೆ ಹೆಸರಲ್ಲಿ ಕಿರುಕುಳ ನೀಡಲಾಗಿತ್ತು. ಅಧಿಕಾರಿಗಳು ಸುಧೀರ್ಘ ತನಿಖೆ ನಡೆಸಿದರೂ ರಾಹುಲ್ ಗಾಂಧಿಯವರ ವಿರುದ್ಧ ಯಾವುದೇ ಸಾಕ್ಷಾಧಾರಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ. ನಮ್ಮ ಪಕ್ಷ ಹಾಗೂ ನಾಯಕರ ಘನತೆಗೆ ಕಪ್ಪು ಚುಕ್ಕೆ ಇಡುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದೆಲ್ಲೆಡೆ ಪಕ್ಷದ ನಾಯಕರು ಜುಲೈ 21 ರಂದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.


ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಎಲ್ಲಾ ಶಾಸಕರು, ನಾಯಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಈ ಸಂದರ್ಭದಲ್ಲಿ ಪೊಲೀಸರು ನಮ್ಮನ್ನು ಬಂಧಿಸಿದರೂ ಪರವಾಗಿಲ್ಲ. ಎಲ್ಲರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ನಾವು ಜನರ ಪರ ಮೇಕೆದಾಟು ಹಾಗೂ ಬೆಲೆ ಏರಿಕೆ ಸೇರಿದಂತೆ ಹಲವು ವಿಚಾರವಾಗಿ ಹೋರಾಟ ಮಾಡಿದಾಗ ಬಿಜೆಪಿ ಸರ್ಕಾರ ನಮ್ಮ ಮೇಲೆ ಪ್ರಕರಣ ದಾಖಲಿಸಿದೆ. ಬಂಧನ, ಕೇಸಿಗೆ ಹೆದರದೆ ಪಕ್ಷಕ್ಕಾಗಿ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಜುಲೈ 21ರಂದು ಎಲ್ಲಾ ನಾಯಕರು ಫ್ರೀಡಂ ಪಾರ್ಕ್ ನಲ್ಲಿ ಸೇರಿ, ಅಲ್ಲಿಂದ ರಾಜಭವನ ಚಲೋ ಪ್ರತಿಭಟನೆ ಮೂಲಕ ರಾಜ್ಯಭವನಕ್ಕೆ ಮುತ್ತಿಗೆ ಹಾಕಬೇಕು. ಜುಲೈ 22 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇದೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರದ ನಮ್ಮ ನಾಯಕರು, ಪದಾಧಿಕಾರಿಗಳು ತಮ್ಮ, ತಮ್ಮ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. 30 ಜಿಲ್ಲೆಗಳಿಗೆ ಪಕ್ಷದ ವತಿಯಿಂದ ವೀಕ್ಷಕರನ್ನು ಕಳುಹಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.


ನಾನು, ಸಿದ್ದರಾಮಯ್ಯ, ಹರಿಪ್ರಸಾದ್, ಎಂ.ಬಿ ಪಾಟೀಲ್ ಸೇರಿದಂತೆ ಹಿರಿಯ ನಾಯಕರು, ಕಾರ್ಯಧ್ಯಕ್ಷರು ಒಂದೊಂದು ಜಿಲ್ಲೆಗೆ ಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ನಾವೆಲ್ಲರೂ ಪ್ರತಿಭಟನೆ ಮಾಡಿ ಸೋನಿಯಾ ಗಾಂಧಿಯವರಿಗೆ ಧೈರ್ಯ ತುಂಬಬೇಕು. ಸುಳ್ಳು ಪ್ರಕರಣಗಳ ಮೂಲಕ ಸರ್ಕಾರ ನಮ್ಮನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದು, ಅದಕ್ಕೆ ನಾವು ಜಗ್ಗುವುದಿಲ್ಲ ಎಂಬ ಸಂದೇಶ ರವಾನಿಸಬೇಕು ಎಂದು ಕರೆ ನೀಡಿದರು.


ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಹೀಗಾಗಿ 75 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆಗಸ್ಟ್ 1 ರಿಂದ 10 ರವರೆಗೂ ಎಲ್ಲಾ ಜಿಲ್ಲೆಗಳಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲಾಗುವುದು. ಯಾವ ಜಿಲ್ಲೆಯಲ್ಲಿ ಎಷ್ಟು ದಿನ ಪಾದಯಾತ್ರೆ ಮಾಡಬೇಕು ಎಂಬ ವಿಚಾರವಾಗಿ ಆಯಾ ಜಿಲ್ಲೆಗಳಿಗೆ ತೀರ್ಮಾನ ಮಾಡುವ ಅಧಿಕಾರ ನೀಡಲಾಗಿದೆ. ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ರಾಷ್ಟ್ರಧ್ವಜ ಹಿಡಿದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ಮೈದಾನದವರೆಗೆ ‘ಸ್ವಾತಂತ್ರ್ಯ ನಡಿಗೆ ‘ ಮಾಡಲಾಗುವುದು. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಎಲ್ಲಾ ಸಂಘ-ಸಂಸ್ಥೆಗಳು ಇದರಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಲ್ಲಿ ಭಾಗವಹಿಸಲು ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಯಾವುದೇ ಭಾಷಣ ಇರುವುದಿಲ್ಲ, ಎಲ್ಲರೂ ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಲಾಗುವುದು. ರಾಷ್ಟ್ರಕ್ಕೆ ಗೌರವ ಸಲ್ಲಿಸುವ ಸಾಂಸ್ಕೃತಿಕ ಕಾರ್ಯಕ್ರಮ ಇದೇ. ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮ ಅಂತ್ಯವಾಗಲಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಿಂದ 300 ರಿಂದ 500 ಜನರು ಭಾಗವಹಿಸಬೇಕು. ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳ ಕ್ಷೇತ್ರಗಳಿಂದ ಕನಿಷ್ಠ 3-4 ಸಾವಿರ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಎಲ್ಲಾ ಸಂಘ ಸಂಸ್ಥೆಗಳು, ಸಾಹಿತಿಗಳು, ಕಲಾವಿದರು, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು, ಕಾರ್ಮಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗುವುದು. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಈ ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಅನುಮತಿ ಕೋರಲಾಗುವುದು. ಬಸವನಗುಡಿ ಮೈದಾನದಲ್ಲಿ ಅನುಮತಿ ನೀಡಲಾಗದಿದ್ದರೆ ಕಂಠೀರವ ಕ್ರೀಡಾಂಗಣದಲ್ಲಿ ನಮ್ಮ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಮನವಿ ಮಾಡಲಾಗುವುದು. ಇದು ರಾಜಕೀಯ ಕಾರ್ಯಕ್ರಮವಲ್ಲ ದೇಶದ ಕಾರ್ಯಕ್ರಮ. ಕಾಂಗ್ರೆಸ್ ಪಕ್ಷ ಈ ಕಾರ್ಯಕ್ರಮದ ಮುಂದಾಳತ್ವ ವಹಿಸಿದೆ. ಸ್ವಾತಂತ್ರ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿರುವ ರಾಜ್ಯದ 10 ಪ್ರಮುಖ ಸ್ಥಳಗಳಿಗೆ ನಮ್ಮ ನಾಯಕರುಗಳು ಭೇಟಿ ನೀಡಿ ಗೌರವ ಸಲ್ಲಿಸಲಿದ್ದಾರೆ ಎಂದು ಡಿಕೆಶಿ ಹೇಳಿದರು.


ಬಿಜೆಪಿಯ ಯಾವ ನಾಯಕರು ಸ್ವಾತಂತ್ರ್ಯ ಹೋರಾಟಕ್ಕಾಗಲಿ, ರಾಷ್ಟ್ರ ನಿರ್ಮಾಣಕ್ಕಾಗಲಿ ಯಾವ ತ್ಯಾಗ ಮಾಡಿದ್ದಾರೆ? ಬಿಜೆಪಿಯವರು ಈ ಬಾರಿ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದು ಸಂತೋಷದ ವಿಚಾರ. ಆದರೆ ಸ್ವಾತಂತ್ರ್ಯ ಬಂದ 75 ವರ್ಷಗಳ ಕಾಲ ಬಿಜೆಪಿಯವರು ಹಾಗೂ ಆರ್ ಎಸ್ ಎಸ್ ನವರು ತಮ್ಮ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ ಏಕೆ? ಬಿಜೆಪಿಯವರು ಈ ತ್ರಿವರ್ಣ ಧ್ವಜ ನೋಡಿದರೆ ಅಸೂಯೆ ಪಡುತ್ತಿದ್ದರು’ ಎಂದು ತಿಳಿಸಿದರು.

ಈ ಪ್ರಕರಣ ಚುನಾವಣಾ ಪಿತೂರಿಯೇ ಎಂಬ ಪ್ರಶ್ನೆಗೆ, ‘ ತ್ಯಾಗಕ್ಕೆ ಮತ್ತೊಂದು ಹೆಸರೇ ಸೋನಿಯಾ ಗಾಂಧಿ. ಪಕ್ಷ ವಿಭಜನೆ ಯಾಗುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಹೋಗಿ ಪಕ್ಷ ಉಳಿಸುವಂತೆ ಅವರಲ್ಲಿ ಮನವಿ ಮಾಡಿಕೊಂಡೆವು. ಆಗ ಅವರು ಪಕ್ಷದ ನೇತೃತ್ವ ವಹಿಸಿಕೊಂಡು ಹತ್ತು ವರ್ಷಗಳ ಕಾಲ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ದೇಶದಲ್ಲಿ ಜನಪರವಾದ ಕಾನೂನು ತಿದ್ದುಪಡಿ ಆಗಿರುವುದು ಕೇವಲ ಕಾಂಗ್ರೆಸ್ ಅವಧಿಯಲ್ಲಿ ಮಾತ್ರ’ ಎಂದು ಪ್ರತಿಕ್ರಿಯಿಸಿದರು.

Join Whatsapp
Exit mobile version