Home ಟಾಪ್ ಸುದ್ದಿಗಳು ನ್ಯಾಯಾಂಗವನ್ನು ದುರ್ಬಲಗೊಳಿಸಲು ಕೇಂದ್ರದಿಂದ ಯತ್ನ: ಸೋನಿಯಾ ಗಾಂಧಿ ಆರೋಪ

ನ್ಯಾಯಾಂಗವನ್ನು ದುರ್ಬಲಗೊಳಿಸಲು ಕೇಂದ್ರದಿಂದ ಯತ್ನ: ಸೋನಿಯಾ ಗಾಂಧಿ ಆರೋಪ

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಬುಧವಾರ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಸರಕಾರವು ನ್ಯಾಯಾಂಗವನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ನಿರಂತರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರಕಾರವು ಸಂಸತ್ತಿನಲ್ಲಿ ಯಾವುದೇ ಚರ್ಚೆಗೆ ತಯಾರಿಲ್ಲ. ಚೀನಾವು ಗಡಿಯಲ್ಲಿ ನಿರಂತರ ತಂಟೆ ಮಾಡುತ್ತಿದ್ದರೂ ಆ ಬಗ್ಗೆ ಸಂಸತ್ತಿಗೆ ಸುಳ್ಳು ಹೇಳಿದ್ದಲ್ಲದೆ ಚರ್ಚೆಗೆ ತಯಾರಿಲ್ಲ ಎಂದು ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಹೇಳಿದರು. 

ನ್ಯಾಯಾಂಗದ ನೇಮಕಾತಿಯನ್ನು ತನ್ನ ಕೈಗೆ ತೆಗೆದುಕೊಳ್ಳಲು ಬಿಜೆಪಿಯು ಇನ್ನಿಲ್ಲದ ಪ್ರಯತ್ನ ನಡೆಸಿರುವುದನ್ನು ಸೋನಿಯಾ ಗಾಂಧಿ ತೀವ್ರವಾಗಿ ಖಂಡಿಸಿದರು. 

ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾದ ಮೇಲೆ ನಡೆದ ಈ ಸಿಪಿಪಿ ಸಭೆಯಲ್ಲಿ ಸೋನಿಯಾ ಗಾಂಧಿಯವರು ಮೋದಿ ಸರಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ದೇಶದ ಹಣಕಾಸು ಸ್ಥಿತಿ ನೆಲ ಕಚ್ಚಿದೆ; ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ. ಸಾಮಾಜಿಕ ಧ್ರುವೀಕರಣದ ಮೂಲಕ ಬಿಜೆಪಿಯು ಪ್ರಜಾಪ್ರಭುತ್ವದ ಮೇಲೆ ಪ್ರಹಾರ ನಡೆಸಿದೆ ಎಂದು ಅವರು ಹೇಳಿದರು.

“ಇಡೀ ದೇಶವೇ ನಮ್ಮ ಸೈನಿಕರ ಪರ ನಿಲ್ಲುತ್ತದೆ. ಹಾಗಿರುವಾಗ ಅವರ ಬಗೆಗಿನ ಚರ್ಚೆ ನಡೆಸಲು ಬಿಜೆಪಿ ಹೆದರುವುದೇಕೆ?” ಎಂದು ಸೋನಿಯಾ ಪ್ರಶ್ನಿಸಿದರು.

“ಯಾವುದೇ ಒಂದು ವಿಶಿಷ್ಟ ಸಮಸ್ಯೆಯನ್ನು ದೇಶವು ಎದುರಿಸುವಾಗ ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಈ ದೇಶದ ಸಂಪ್ರದಾಯ. ಚರ್ಚೆಯು ಹಲವಾರು ಪ್ರಶ್ನೆಗಳಿಗೆ ಉತ್ತರವಾಗಬಲ್ಲುದು. ಮೋದಿಯವರ ಸರಕಾರವು ಚೀನಾಕ್ಕೆ ರಫ್ತು ಮಾಡುವುದಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಜಾಗತಿಕ ಸಮುದಾಯವನ್ನು ತಲುಪಲು ಈ ಸರಕಾರ ಸರಿಯಾದ ರಾಯಭಾರಿ ನೀತಿಯನ್ನೇ ಹೊಂದಿಲ್ಲ” ಎಂದು ಅವರು ಟೀಕಿಸಿದರು.

ಏನು ಸಮಸ್ಯೆ, ಏನು ಕ್ರಮ ಎಂಬುದನ್ನು ತಿಳಿಸುವುದು ಸರಕಾರದ ಜವಾಬ್ದಾರಿ. ಚರ್ಚೆಗೆ ತಯಾರಿಲ್ಲದ ಬಿಜೆಪಿಯು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿದೆ. ಇವರು ದೇಶವನ್ನು ಒಗ್ಗೂಡಿಸುವ ಬದಲು ಒಡೆಯುತ್ತಿದ್ದಾರೆಯೇ ಎಂದವರು ಪ್ರಶ್ನಿಸಿದರು.

“ದ್ವೇಷ ನೀತಿಯಿಂದ ಬಿಜೆಪಿ ಸರಕಾರ ನಡೆಸುತ್ತಿದೆ. ಸಮಾಜದ ಕೆಲವು ವರ್ಗವನ್ನು ಗುರಿಯಾಗಿಸಿಕೊಂಡು ದ್ವೇಷವನ್ನು ಹರಡುತ್ತಿದೆ. ಅದು ನಮ್ಮ ದೇಶವನ್ನು ದುರ್ಬಲಗೊಳಿಸುತ್ತದೆ. ಸರಕಾರಕ್ಕೆ ಯಾವಾಗಲೂ ದೇಶವನ್ನು ಒಗ್ಗೂಡಿಸುವ ನೀತಿ ಇರಬೇಕು” ಎಂದು ಸೋನಿಯಾಜಿ ಹೇಳಿದರು.

ಬೆಲೆಯೇರಿಕೆಯು ಜನರ ಬೆನ್ನೆಲುಬು ಮುರಿಯುತ್ತಿದೆ. ಯುವ ಜನಾಂಗವು ಕೆಲಸವಿಲ್ಲದೆ ಹತಾಶರಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಮೋದಿಯವರ ಅವಧಿಯಲ್ಲಿ ಸಾರ್ವಜನಿಕ ವಲಯನ್ನು ಖಾಸಗೀಕರಣಗೊಳಿಸಿ ಬಡವರ ಉದ್ಯೋಗಾವಕಾಶವನ್ನು ಕ್ಷೀಣಗೊಳಿಸಲಾಗಿದೆ. ದೇಶದಲ್ಲಿ ಹೆಚ್ಚು ಉದ್ಯೋಗಾವಕಾಶ ಒದಗಿಸುವ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆಗಳು ಮೋದಿ ಆಡಳಿತದಲ್ಲಿ ಸಂಕಷ್ಟಕ್ಕೆ ಸಿಲುಕಿವೆ. ಜಿಎಸ್’ಟಿ ನೀತಿಯಿಂದ ಉದ್ಯಮ ವಲಯ ಹತಾಶಗೊಂಡಿದೆ. ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸದಿರುವುದರಿಂದ ಕಠಿಣ ಹವಾಮಾನದತ್ತ ದೇಶ ದೂಡಲ್ಪಟ್ಟಿದೆ. ಕೃಷಿ ಕಾಯ್ದೆಗಳು ರೈತರನ್ನು ಲಗಾಡಿ ತೆಗೆದಿವೆ ಎಂದೂ ಸೋನಿಯಾ ಹೇಳಿದರು.

ಗಂಭೀರ ವಿಷಯಗಳಲ್ಲಿ ಮೂಕ ಬಸವನಂತೆ ವರ್ತಿಸುವುದು ಈ ಸರಕಾರದ ನೀತಿ. ಚರ್ಚೆಗೆ ಬಾರದ ಮೋದಿ ಸರಕಾರವು ಸಂಸತ್ತಿನ ಹೊರಗೆ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸುವುದು, ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಛೂ ಬಿಡುವುದು ನಡೆಸಿದೆ ಎಂದು ಸೋನಿಯಾ ಹೇಳಿದರು.

ಕೇಂದ್ರದಲ್ಲಿ ಮಾತ್ರವಲ್ಲ, ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಸರಕಾರವು ಎಲ್ಲವನ್ನು ಹಿಮ್ಮುಖಕ್ಕೆ ನಡೆಸಿದೆ ಎಂದೂ ಅವರು ಹೇಳಿದರು.

Join Whatsapp
Exit mobile version