ಅಲ್ ಅಖ್ಸಾ ಮಸ್ಜಿದ್ ಹಾಗೂ ಫೆಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್ ನಡೆಸಿದ ಭಯೋತ್ಪಾದನಾ ಕೃತ್ಯವನ್ನು ಖಂಡಿಸಿ ಮತ್ತು ಫೆಲೆಸ್ತೀನ್ ಜನರಿಗೆ ಐಕಮತ್ಯವನ್ನು ತೋರ್ಪಡಿಸುವ ನಿಟ್ಟಿನಲ್ಲಿ #WeAreAlQuds (ನಾವೂ ಖುದ್ಸ್) ಘೋಷಣೆಯಡಿಯಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಈದ್ ಉಲ್ ಫಿತ್ರ್ ದಿನದಂದು ಈ ಅಭಿಯಾನ ನಡೆಯುತ್ತಿದ್ದು, ಕುಟುಂಬ ಸದಸ್ಯರು ಸರಳ ಈದ್ ಆಚರಣೆಯೊಂದಿಗೆ ಪ್ಲಕಾರ್ಡ್ ಮತ್ತಿತರ ಪರಿಕರಗಳ ಮೂಲಕ ಫೆಲೆಸ್ತೀನ್ ಜನತೆಗೆ ಬೆಂಬಲವನ್ನು ಘೋಷಿಸುವ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇವುಗಳಲ್ಲಿ “ಈ ಬಾರಿಯ ನಮ್ಮ ಈದ್ ಫೆಲೆಸ್ತೀನ್ ಜನರೊಂದಿಗೆ” ಮತ್ತು #WeAreAlQuds” ಘೋಷವಾಕ್ಯಗಳು ಪ್ರಮುಖವಾಗಿ ಕಂಡು ಬರುತ್ತಿದೆ. ಅಭಿಯಾನದಲ್ಲಿ ಮಕ್ಕಳ ಭಾಗವಹಿಸುವಿಕೆಯು ವಿಶೇಷ ಆಕರ್ಷಣೆಯಾಗಿ ಕಂಡು ಬರುತ್ತಿದೆ.
ಇಂದು ಈದ್ ಆಚರಿಸುತ್ತಿರುವ ಕರಾವಳಿಯ ಜನತೆ ಮತ್ತು ಗಲ್ಫ್ ರಾಷ್ಟ್ರದಲ್ಲಿರುವ ಅನಿವಾಸಿ ಭಾರತೀಯರಿಂದ ಈ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಅದೇ ರೀತಿ ಭಾರತದ ಬಹುತೇಕ ಕಡೆಗಳಲ್ಲಿ ನಾಳೆ ಈದ್ ಆಚರಣೆ ನಡೆಯಲಿದ್ದು, ಈ ಅಭಿಯಾನಕ್ಕೆ ಮತ್ತಷ್ಟು ಬೆಂಬಲ ವ್ಯಕ್ತವಾಗಲಿದೆ ಎಂದು ಹೇಳಲಾಗುತ್ತಿದೆ.