✍️ನಟ ಕಿಶೋರ್ ಕುಮಾರ್
►ಹಾಗಾದರೆ ನಾವು ಹಿಂದೂಗಳಲ್ಲವೇ?
►ಇದಾವುದು ಹೊಸ ಧರ್ಮ ? ಸನಾತನ?
ಕೆಲಸ ಮಾಡಲು ಯೋಗ್ಯತೆಯಿಲ್ಲದೆ ಈ ಪದಗಳ ರಾಜಕೀಯ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿರುವವರನ್ನು ಇದರ ಸಂಪೂರ್ಣ ನಿಖರ ಅರ್ಥ ಹೇಳಲು ಕೇಳಿಬಿಡಿ ಸಾಕು..
ವಾಟ್ಸಾಪ್ ವಿಶ್ವವಿದ್ಯಾಲಯದಿಂದ ಹೊರಬಂದು , ಹಿಂದೂ ಪದದ ನಿಜ ಅರ್ಥ, ಮೂಲ, ಅದರ ಹಿಂದಿನ ದ್ವೇಷದ ರಾಜಕೀಯ ಪ್ರಚಲಿತವಾಗುತ್ತಿದ್ದಂತೆ ಅದನ್ನು ಬಿಟ್ಟು ಸನಾತನ ಪದ ಹಿಡಿದ ದ್ವೇಷದ ವರ್ತಕರು ಅದನ್ನೂ ರಾಜಕೀಯ ಲಾಭಕ್ಕಾಗಿ ಬಳಸಿದ್ದೇ ಈ ಅನವಶ್ಯಕ ಚರ್ಚೆಗೆ ಕಾರಣ. ರಾಜಕೀಯದ ದೃಷ್ಟಿಯಿಂದ ಉದಯನಿಧಿಯವರ ಭಾಷಾಪ್ರಯೋಗದ ತೀಕ್ಷ್ಣತೆ ಸ್ವಲ್ಪ ಕಡಿಮೆಯಾಗಬಹುದಿತ್ತೆನಿಸಿದರೂ ಅವರು ಖಂಡಿಸಿದ್ದು ಇವರ ದ್ವೇಷದ ಜಾತಿವಾದದ, ಅಸ್ಪೃಷ್ಯತೆಯ , ಅಸಮಾನತೆಯ ವೈದಿಕ ರಾಜಕೀಯವು ಕಿಡ್ನಾಪ್ ಮಾಡಿದ ಸನಾತನವನ್ನು , ಆದಿ ಅಂತ್ಯವಿಲ್ಲದ ಸನಾತನ ಪದವನ್ನಲ್ಲವೆಂಬುದು ಸ್ಪಷ್ಟ ..
ಅದನ್ನು ಸನಾತನಿಗಳ ಮಾರಣಹೋಮಕ್ಕೆ ಹೋಲಿಸಿದ ಇವರ ದ್ವೇಷದ ವಕ್ತಾರನಿಗೆ ಇವರ ಪಕ್ಷದ ಪ್ರಧಾನಿ ಊರಲ್ಲೆಲ್ಲ ಕಾಂಗ್ರೆಸ್ ಮುಕ್ತವೆಂದು ಕೂಗಾಡುತ್ತ ತಿರುಗಿದಾಗ ಕಾಂಗ್ರೆಸಿಗರ ಮಾರಣಹೋಮಕ್ಕೆ ಕರೆ ನೀಡಿದ್ದರೇ ಕೇಳಬೇಕಲ್ಲ..
ಧರ್ಮವೆನ್ನುವುದು ಅಧರ್ಮದ ವಿರುದ್ಧ ಪದವಾದರೆ, ಅಧರ್ಮವೆನ್ನುವುದು ಕೆಟ್ಟ ಕೆಲಸವೆಂದಾದರೆ, ಒಳ್ಳೆಯ ಕೆಲಸ ಮಾಡುವುದಷ್ಟೇ ಧರ್ಮವೇ ಹೊರತು ಹಲವು ನಂಬಿಕೆಯ ಮೂಟೆಗಳಲ್ಲ.
ಈ ದಾರಿತಪ್ಪಿಸುವ ಧರ್ಮಾಂಧ ರಾಜಕೀಯದಲ್ಲಿ ನಮ್ಮ ಜ್ವಲಂತ ಸಮಸ್ಯೆಗಳೂ , ಜಾತಿವಾದದ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ರೌರ್ಯದ, ಅಸಮಾನತೆಯ ಸಮಸ್ಯೆಗಳೆಲ್ಲ ಕೊಚ್ಚಿ ಹೋಗುವ ಮುನ್ನ ಎಚ್ಚರಗೊಳ್ಳುವ.
ಮನುಷ್ಯರನ್ನು ಮನುಷ್ಯರಾಗಿ, ಕಾಣುವ ಮನುಷ್ಯ ಧರ್ಮದವರಾಗುವ. ವಿಶ್ವಮಾನವರಾಗುವ.