ಸ್ಮಾರ್ಟ್‌ಮೀಟರ್ ಟೆಂಡರ್‌ ಪ್ರಕ್ರಿಯೆ ಪಾರದರ್ಶಕ: ಇಂಧನ ಸಚಿವ ಕೆ.ಜೆ. ಜಾರ್ಜ್‌

- Advertisement -

►ಬಿಜೆಪಿಯವರ ಸುಳ್ಳು ಆರೋಪಗಳನ್ನು ಒಪ್ಪಲಾಗದು

- Advertisement -

ಬೆಂಗಳೂರು : ಸ್ಮಾರ್ಟ್‌ಮೀಟರ್ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ, ಈ ಕುರಿತ ಬಿಜೆಪಿಯ ಆರೋಪಗಳಲ್ಲಿ ಹುರಳಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ ಸಿ) ಆದೇಶದಂತೆ ರಾಜ್ಯದಲ್ಲಿ ಹೊಸ ಮತ್ತು ತಾತ್ಕಾಲಿಕ ಸಂಪರ್ಕಗಳಿಗೆ ಮಾತ್ರ ಮೀಟರ್ ಅಳವಡಿಸಲಾಗುತ್ತಿದೆ. ಅದಕ್ಕಾಗಿ ಕೆಟಿಪಿಪಿ ಕಾಯ್ದೆ ಅನುಸಾರ ಟೆಂಡರ್ ಕರೆದು ನಂತರ ಪ್ರಿಬಿಡ್‌ ಸಭೆಯಲ್ಲಿ ಆಸಕ್ತ ಬಿಡ್ಡುದಾರರ ಪ್ರಶ್ನೆಗಳಿಗೆ ಉತ್ತರಿಸಲಾಗಿತ್ತು. ಬಳಿಕ ಅತಿ ಕಡಿಮೆ ಬಿಡ್ ಮಾಡಿದ್ದ ರಾಜಶ್ರೀ ಎಂಟರ್ ಪ್ರೈಸಸ್‌ನವರಿಗೆ ಗುತ್ತಿಗೆ ನೀಡಲಾಗಿದೆ”, ಎಂದು ಹೇಳಿದರು.

- Advertisement -

“ಬಿಜೆಪಿಯವರು ವಿಧಾನಸಭೆಯಲ್ಲಿ ಸ್ಮಾರ್ಟ್ ಮೀಟರ್ ಪ್ರಸ್ತಾಪಿಸಿದಾಗ ಉತ್ತರ ಕೊಡುವುದಾಗಿ ಹೇಳಿದ್ದೆ. ಅದರಂತೆ ಮಾರನೇ ದಿನ ಉತ್ತರ ಕೊಡಲು ಸಿದ್ಧವಾಗಿಯೇ ಬಂದು ಕಲಾಪ ಆರಂಭವಾಗುವಾಗ ಅವಕಾಶ ಕೇಳಿದ್ದೆ. ಆದರೆ, ಸಭಾಧ್ಯಕ್ಷರು ಬಜೆಟ್ ಕುರಿತ ಚರ್ಚೆಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಉತ್ತರಿಸಿದ ಬಳಿಕ ನನಗೆ ಉತ್ತರಿಸಲು ಅವಕಾಶ ನೀಡುವುದಾಗಿ ಹೇಳಿದರು. ಆದರೆ, ಮುಖ್ಯಮಂತ್ರಿಗಳ ಉತ್ತರದ ವೇಳೆಯೇ ಬಿಜೆಪಿಯವರು ಗದ್ದಲ ಮಾಡಿ ಕಲಾಪ ನಡೆಸಲು ಅವಕಾಶ ಕೊಡಲಿಲ್ಲ. ಗಲಾಟೆ ಮಾಡಿ ಉತ್ತರ ಕೊಡಲೂ ಅವಕಾಶ ನೀಡಲಿಲ್ಲ. ಹಾಗಾಗಿ ನನಗೆ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಇದನ್ನು ಮುಚ್ಚಿಟ್ಟು ಬಿಜೆಪಿಯವರು ನನ್ನ ಮೇಲೆ ವೃಥಾರೋಪ ಮಾಡುತ್ತಿದ್ದಾರೆ”, ಎಂದರು.

“ಕೇಂದ್ರ ಸರ್ಕಾರದ ಪರಿಷ್ಕೃತ ವಿತರಣಾ ವಲಯ ಯೋಜನೆ (ಆರ್ ಡಿಎಸ್ಎಸ್) ಜಾರಿಗೊಳಿಸಿದ್ದರೆ ಅಥವಾ ಕೇಂದ್ರ ಸರ್ಕಾರದ ನಿರ್ದೇಶನದಂತೆ ನಾವು ಮುಂದುವರಿದಿದ್ದರೆ ಹೊಸ ಮತ್ತು ತಾತ್ಕಾಲಿಕ ಸ್ಥಾಪನಗಳ ಜತೆಗೆ ಹಾಲಿ ಸ್ಥಾಪನಗಳಿಗೂ (2.16 ಕೋಟಿ) ಸ್ಮಾರ್ಟ್ ಮೀಟರ್ ಅಳವಡಿಸಬೇಕಿತ್ತು. ಆದರೆ, ಗ್ರಾಹಕರ ಮೇಲೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಅದನ್ನು ಜಾರಿಗೊಳಿಸಲಿಲ್ಲ. ಕೆಇಆರ್‌ಸಿ ಆದೇಶದಂತೆ ಹೊಸ ಮತ್ತು ತಾತ್ಕಾಲಿಕ ಸ್ಥಾಪನಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಲಾಗುತ್ತಿದೆ. ನಮಗೆ ಜನಹಿತ ಮುಖ್ಯವಾಗಿದ್ದರಿಂದ ಈ ನಿರ್ಧಾರ ಕೈಗೊಂಡೆವು “, ಎಂದು ಹೇಳಿದರು.

ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆಯೇ ವಿಭಿನ್ನ

“ಆರ್‌ ಡಿಎಸ್‌ಎಸ್‌ ಅನುಷ್ಠಾನಗೊಳಿಸಿರುವ ರಾಜ್ಯಗಳ ವಿದ್ಯುತ್‌ ಸರಬರಾಜು ಕಂಪನಿಗಳು ಎಲ್ಲಾ ಮನೆಗಳಲ್ಲಿ ಏಕ ಕಾಲದಲ್ಲಿ (Bulk replacement) ಸ್ಮಾರ್ಟ್ ಮೀಟರ್ ಅಳವಡಿಸಿ ಅದಕ್ಕೆ ಪೂರಕವಾದ ತಾಂತ್ರಿಕ ನಿರ್ವಹಣೆ ವೆಚ್ಚವನ್ನು ಪ್ರತಿ ತಿಂಗಳ ಬಿಲ್‌ನಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಅಂದರೆ, ಕಂತಿನಲ್ಲಿ ಸ್ಮಾರ್ಟ್‌ಮೀಟರ್‌ ಹಾಗೂ ತಾಂತ್ರಿಕ ನಿರ್ವಹಣೆ ವೆಚ್ಚವನ್ನು ಗ್ರಾಹಕರಿಂದ ವಸೂಲಿ ಮಾಡುತ್ತವೆ. ಆದರೆ, ನಮ್ಮ ರಾಜ್ಯದಲ್ಲಿ ಇರುವ ನಿಯಮದ ಪ್ರಕಾರ, ವಿದ್ಯುತ್‌ ಮೀಟರ್‌ಗಳನ್ನು ಗ್ರಾಹಕರೇ ಭರಿಸಬೇಕು. ಆರ್‌ಡಿಎಸ್ಎಸ್‌ ಅನುಷ್ಠಾನಗೊಳಿಸದ ಕಾರಣ ನಮ್ಮಲ್ಲಿ ಹೊಸ ಮತ್ತು ತಾತ್ಕಲಿಕ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸುತ್ತಿರುವುದರಿಂದ ಮೀಟರ್‌ ದರವನ್ನು (ಸಿಂಗಲ್‌ ಫೇಸ್ – 4,998 ರೂ.) ಆ ಗ್ರಾಹಕರೇ ಭರಿಸಬೇಕಾಗುತ್ತದೆ. ಪ್ರತಿ ತಿಂಗಳ ತಾಂತ್ರಿಕ ನಿರ್ವಹಣೆ ವೆಚ್ವವನ್ನು ಬೆಸ್ಕಾಂ ಭರಿಸಿ, ನಂತರ ದರ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ತಾತ್ಕಾಲಿಕ ಸಂಪರ್ಕಕ್ಕೆ ಪ್ರಿ-ಪೇಯ್ಡ್‌ಗೆ ಮಾತ್ರ ಅವಕಾಶವಿದ್ದು, ಪೋಸ್ಟ್‌ ಪೇಯ್ಡ್‌ ಆಯ್ಕೆ ಇರುವುದಿಲ್ಲ. ಹೊಸ ಸಂಪರ್ಕಗಳಿಗೆ ಪ್ರಿ-ಪೇಯ್ಡ್‌ ಹಾಗೂ ಪೋಸ್ಟ್‌-ಪೇಯ್ಡ್‌ ಆಯ್ಕೆ ಲಭ್ಯವಿರುತ್ತದೆ”, ಎಂದು ಹೇಳಿದರು.

“ಕೇಂದ್ರ ಇಂಧನ ಪ್ರಾಧಿಕಾರದ ನಿರ್ದೇಶನದಂತೆ 2021-22 ನೇ ಸಾಲಿನಲ್ಲಿ ಆರ್‌ಡಿಎಸ್ (RDSS- Revamped Distribution Sector Scheme) ಯೋಜನೆ ರೂಪಿಸಿದ್ದು, ಕೇಂದ್ರದ ಇಂಧನ ಸಚಿವಾಲಯವು ಮಾರ್ಗಸೂಚಿ ಹೊರಡಿಸಿ, ವಿದ್ಯುತ್‌ ಸರಬರಾಜು ತಮ್ಮ ಸಬ್ಸಿಡಿ ಸೇರಿದಂತೆ ಎಲ್ಲಾ ಬಾಕಿಗಳನ್ನು ಪಾವತಿಸಿದ್ದರೆ ಸ್ಮಾರ್ಟ್ ಮೀಟರ್ ಅಳವಡಿಸಲು ಕೇಂದ್ರದಿಂದ ಪ್ರತಿ ಮೀಟರ್ಗೆ ಗರಿಷ್ಠ 900 ರೂ. ಅಥವಾ ಮೀಟರ್ ದರದ ಶೇ. 15ರಷ್ಟನ್ನು ಸಬ್ಸಿಡಿಯಾಗಿ ನೀಡುವುದಾಗಿ ಹೇಳಿತ್ತು. ಅದರಂತೆ ದೇಶದ ಇತರೆ ರಾಜ್ಯಗಳು ಯೋಜನೆಯಡಿ, ಏಕಕಾಲದಲ್ಲಿ ಎಲ್ಲಾ ಗ್ರಾಹಕರ ಸ್ಥಾಪನಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಸಿದ್ದವು. ಆದರೆ, ನಮ್ಮ ರಾಜ್ಯ ಆಗ ಯೋಜನೆ ಅಳವಡಿಸಿಕೊಂಡಿರಲಿಲ್ಲ”, ಎಂದು ತಿಳಿಸಿದರು.

ಟೆಂಡರ್‌ಪಾರದರ್ಶಕವಾಗಿ ನಡೆದಿದೆ
“ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2024ರ ಫೆಬ್ರವರಿ 6 ಮತ್ತು ಮಾರ್ಚ್‌ 6ರಂದು ಹೊರಡಿಸಿದ್ದ ನಿಯಮಾವಳಿ ಪ್ರಕಾರ ರಾಜ್ಯದಲ್ಲಿ ಎಲ್ಲ ತಾತ್ಕಾಲಿಕ ಸ್ಥಾಪನಗಳು ಹಾಗೂ ಹೊಸ ಸ್ಥಾಪನಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಸೂಚಿಸಿತ್ತು. ಅದರಂತೆ, ಕೇಂದ್ರ ವಿದ್ಯುತ್ ಸಚಿವಾಲಯ ನಿಗದಿಪಡಿಸಿರುವ ಸಾಮಾನ್ಯ ಬಿಡ್ಡಿಂಗ್ ದಾಖಲೆ (Standard Bidding Document)ಗಳ ಪ್ರಕಾರ ಹಾಗೂ ಕೆಟಿಪಿಪಿ ಕಾಯ್ದೆ ಅನುಸಾರ 2024ರ ಸೆ. 26ರಂದು ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಟೆಂಡರ್‌ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು. ಈ ಟೆಂಡರ್‌ನಲ್ಲಿ ಕಡಿಮೆ ದರ ಬಿಡ್‌ ಮಾಡಿದ್ದ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಸಂಸ್ಥೆಗೆ 2024ರ ಡಿಸೆಂಬರ್‌ 23ರಂದು ಗುತ್ತಿಗೆ ನೀಡಲಾಯಿತು”, ಎಂದು ಹೇಳಿದರು.

“ರಾಜ್ಯದಲ್ಲಿ ಆರ್‌ಡಿಎಸ್ ಯೋಜನೆ ಜಾರಿಯಲ್ಲಿ ಇಲ್ಲದಿರುವುದರಿಂದ ಸ್ಮಾರ್ಟ್ ಮೀಟರ್ ದರ ಹಾಗು ಅಡ್ವಾನ್ಸ್‌ಡ್‌ ಮೀಟರಿಂಗ್ ಇನ್ಫ್ರಾಸ್ಟ್ರಕ್ಚರ್ (AMI) ತಂತ್ರಜ್ಞಾನದ ದರವನ್ನು ಟೆಂಡರ್‌ ಮೂಲಕ ಪ್ರತ್ಯೇಕವಾಗಿ ಪಡೆಯಲಾಗಿರುತ್ತದೆ. ಕೆಟಿಪಿಪಿ ಕಾಯ್ದೆಯ ಕೆಡಬ್ಲ್ಯು 4ರ ನಿಬಂದನೆ ಅನ್ವಯ, ಹಣಕಾಸು ವಹಿವಾಟನ್ನು ನಿಗದಿಪಡಿಸಲಾಗಿರುತ್ತದೆ. ಅದರಂತೆ, 354 ಕೋಟಿ ರೂ. ವಹಿವಾಟು ಹೊಂದಿರುವ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಸಂಸ್ಥೆಯು ಸುಮಾರು 15 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಕ್ಲಾಸ್ 1 ಸೂಪರ್ ಗ್ರೇಡ್ ಎಲೆಕ್ಟ್ರಿಕಲ್ ಗುತ್ತಿಗೆದಾರರಾಗಿದ್ದಾರೆ. ಸಾಮಾನ್ಯ ಬಿಡ್ಡಿಂಗ್‌ ದಾಖಲೆ (SBD) ಹಾಗೂ ಟೆಂಡರ್‌ನಲ್ಲಿ ವಿಧಿಸಿರುವ ಷರತ್ತಿನಂತೆ ಸ್ಮಾರ್ಟ್‌ ಮೀಟರ್‌ ತಯಾರಿಸುವ ಮೂರು ಕಂಪನಿಗಳಾದ ಸ್ನೈಡರ್‌, ಜೀನಸ್‌ ಮತ್ತು ಓಪಸ್‌ ಜತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಅದೇ ರೀತಿ ಎಸ್‌ಬಿಡಿ ಮತ್ತು ಟೆಂಡರ್‌ನಲ್ಲಿ ವಿಧಿಸಿರುವ ಷರತ್ತಿನಂತೆ, ಸಾಫ್ಟ್‌ವೇರ್‌ ಸೇವೆ ಒದಗಿಸುವ ಕಂಪನಿಯಾದ ಬಿಸಿಐಟಿಎಸ್‌ರವರ ಜತೆಗೂ ಒಡಂಬಡಿಕೆ ಮಾಡಿಕೊಂಡಿರುತ್ತಾರೆ”, ಎಂದು ವಿವರಿಸಿದರು.

ಬಿಸಿಐಟಿಎಸ್‌ ಸಂಸ್ಥೆಯು ಕಪ್ಪು ಪಟ್ಟಿಗೆ ಸೇರಿಲ್ಲ
“ಬಿಸಿಐಟಿಎಸ್‌ ಸಂಸ್ಥೆಯು ಕಪ್ಪು ಪೆಟ್ಟಿಗೆ ಸೇರಿಸಲಾಗಿದೆ ಎಂಬ ಆರೋಪದ ಬಗ್ಗೆ ವಿವರಣೆ ನೀಡಿದ ಸಚಿವರು, ಟೆಂಡರ್‌ ಹಂತದಲ್ಲಿಯೇ ಈ ವಿಷಯವನ್ನು ಪರಿಶೀಲಿಸಲಾಗಿತ್ತು. ಬಿಸಿಐಟಿಎಸ್‌ ಸಂಸ್ಥೆ ಆರ್‌ಡಿಎಸ್‌ ಯೋಜನೆಯಡಿ ವಿವಿಧ ರಾಜ್ಯಗಳ 23 ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸೇವೆ ನೀಡುತ್ತಿದೆ. ಈ ಸಂಸ್ಥೆಯನ್ನು ಯಾವುದೇ ಸರ್ಕಾರ/ಇಲಾಖೆ ಕಪ್ಪು ಪಟ್ಟಿಗೆ ಸೇರಿಸುವುದಿಲ್ಲ. ಈ ಸಂಸ್ಥೆಗೆ 2023ರ ಜ.6 ರಿಂದ 2025ರ ಜ.5ರವರೆಗೆ ಯಾವುದೇ ಟೆಂಡರ್‌ನಲ್ಲಿ ಭಾಗವಹಿಸದಂತೆ ಪೂರ್ವಾಂಚಲ ವಿದ್ಯುತ್‌ ವಿತರಣಾ ನಿಗಮ, (ವಾರಾಣಸಿ ಉತ್ತರಪ್ರದೇಶ) ನಿರ್ಬಂಧಿಸಿತ್ತು. ಹಾಲಿ ಟೆಂಡರ್‌ನಲ್ಲಿನ ಎಲ್‌1 ಬಿಡ್‌ದಾರರಾದ ರಾಜಶ್ರೀ ಎಲೆಕ್ಟ್ರಿಕಲ್ಸ್‌ರವರು ಬಿಸಿಐಟಿಎಸ್‌ ಜತೆಗೆ ನಿರ್ಬಂಧಿತ ಅವಧಿಯ ಮುಕ್ತಯವಾದ ನಂತರವೇ ಒಡಂಬಡಿಕೆ ಮಾಡಿಕೊಂಡಿರುತ್ತಾರೆ. ಹಾಗಾಗಿ ಈ ಕುರಿತ ಆರೋಪದಲ್ಲಿ ಹುರುಳಿಲ್ಲ”, ಎಂದು ತಿಳಿಸಿದರು.

ದರ/ಸಾಫ್ಟ್‌ವೇರ್‌ ವ್ಯತ್ಯಾಸ ಏನು?
“ಆರ್‌ಡಿಎಸ್‌ಎಸ್‌ ಜಾರಿಯಲ್ಲಿರುವ ರಾಜ್ಯಗಳಲ್ಲಿ ಏಕಕಾಲದಲ್ಲಿ ಎಲ್ಲ ಹಾಲಿ ಮೀಟರ್‌ಗಳನ್ನು ಸ್ಮಾರ್ಟ್‌ ಮೀಟರ್‌ಗಳಾಗಿ ಬದಲಾಯಿಸಲಾಗುತ್ತದೆ. ಆಗ ಮೀಟರ್‌ಗಳನ್ನು ಸಗಟು ದರದಲ್ಲಿ ಖರೀದಿಸುವುದರಿಂದ ಕಡಿಮೆ ಬೆಲೆಗೆ ಸಿಗುತ್ತದೆ. ನಿರ್ದಿಷ್ಟ ಪ್ರದೇಶದ ಪೂರ್ಣ ವ್ಯಾಪ್ತಿಯಲ್ಲಿ ಮೀಟರ್‌ಗಳನ್ನು ಬದಲಾಯಿಸುವುದರಿಂದ ಸಾರಿಗೆ, ಸಿಬ್ಬಂದಿ ವೆಚ್ಚ ಕಡಿಮೆಯಾಗುತ್ತದೆ. ಹಾಗಾಗಿ, ಇಡೀ ಪ್ರಕ್ರಿಯೆಯನ್ನು ಕಡಿಮೆ ಅವಧಿಯಲ್ಲಿಯೂ ಪೂರ್ಣಗೊಳಿಸಬಹುದಾಗಿದೆ. ಈ ರಾಜ್ಯಗಳಲ್ಲಿ ಸಂವಹನಕ್ಕಾಗಿ ರೇಡಿಯೋ ಫ್ರಿಕ್ವೆನ್ಸಿ (RF) ಅಥವಾ ಜಿಪಿಆರ್‌ಎಸ್‌ ತಂತ್ರಜ್ಞಾನಗಳ ಬಳಕೆ ಮಾಡಬಹುದಾದ ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಮೀಟರ್‌ಗಳ ದರ ಸ್ವಾಪಬಲ್‌ ಮೀಟರ್‌ಗಿಂತ ಕಡಿಮೆ ಇರುತ್ತದೆ ಎಂದು”, ಮಾಹಿತಿ ನೀಡಿದರು.

“ನಮ್ಮ ರಾಜ್ಯದಲ್ಲಿ ತಾತ್ಕಾಲಿಕ ಹಾಗೂ ಹೊಸ ಸ್ಥಾಪನಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗುತ್ತಿದೆ. ಹೀಗಾಗಿ ಸ್ಮಾರ್ಟ್‌ ಮೀಟರ್‌ಗಳ ಖರೀದಿ ಸಂಖ್ಯೆಯು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬಹಳ ಕಡಿಮೆ ಇದ್ದು, ಸಗಟು ದರದಲ್ಲಿ ಲಭ್ಯವಾಗುವುದಿಲ್ಲ. ಪ್ರತಿ ಹೊಸ ಸ್ಥಾಪನಗಳಿಗೂ ಪ್ರತ್ಯೇಕವಾಗಿ ತೆರಳಿ ಸ್ಮಾರ್ಟ್‌ ಮೀಟರ್‌ ಅಳವಡಿಸಬೇಕಾಗುವ ಕಾರಣ ಸಾರಿಗೆ ವೆಚ್ಚ, ಸಿಬ್ಬಂದಿ ವೆಚ್ಚವೂ ಹೆಚ್ಚಾಗುತ್ತದೆ. ಅಲ್ಲದೇ, ಕಡಿಮೆ ಮೀಟರ್‌ಗಳನ್ನು ಬದಲಾಯಿಸಲು ಅನೇಕ ಬಾರಿ ಓಡಾಡಬೇಕಾಗುವುದರಿಂದ ಹೆಚ್ಚಿನ ಸಮಯವೂ ಹಿಡಿಯುತ್ತದೆ. ಅನುಷ್ಠಾನದ ಅವಧಿ 5 ವರ್ಷ ಇರುವುದರಿಂದ ಬಿಡ್ಡುದಾರರರು ಮೀಟರ್‌ ಅಳವಡಿಕೆ ಕಾರ್ಯಕ್ಕೆ ನುರಿತ ಕೆಲಸಗಾರರನ್ನು 5 ವರ್ಷಗಳ ಕಾಲ ನಿಯೋಜಿಸಬೇಕಾಗುತ್ತದೆ”, ಎಂದು ಹೇಳಿದರು.

“ರಾಜ್ಯದಲ್ಲಿ ಅಳವಡಿಸುತ್ತಿರುವ ಸ್ಮಾರ್ಟ್‌ ಮೀಟರ್‌ಗಳು – ರೇಡಿಯೋ ಫ್ರಿಕ್ವೆನ್ಸಿ (RF) ಮತ್ತು ಜಿಪಿಆರ್‌ಎಸ್‌ ತಂತ್ರಜ್ಞಾನಗಳೆರಡನ್ನು ಹೊಂದಿದ್ದು, ಅಗತ್ಯಕ್ಕೆ ಅನುಗುಣವಾಗಿ ಪರಸ್ಪರ ಬದಲಾಯಿಸಬಹುದಾದಾಗಿದೆ (Swappable Model). ಈ ಎಲ್ಲ ಅಂಶಗಳನ್ನು ಅವಲೋಕಿಸಿದ ಬೆಸ್ಕಾಂನ ತಾಂತ್ರಿಕ ಸಮಿತಿಯು ರಾಜ್ಯದಲ್ಲಿನ ಸ್ಮಾರ್ಟ್‌ ಮೀಟರ್‌ಗೆ ನಿಗದಿಪಡಿಸಿರುವ ದರ ಸಮಂಜಸವಾಗಿದೆ ಎಂದು ವರದಿ ನೀಡಿತ್ತು”, ಎಂದು ತಿಳಿಸಿದರು.

“ಕೇಂದ್ರ ಸರ್ಕಾರದ ಸಬ್ಸಿಡಿ ಸೇರಿ 10 ವರ್ಷಗಳ ಕಾಲ ಪ್ರತಿ ಸ್ಮಾರ್ಟ್ ಮೀಟರ್‌ ಮತ್ತು ತಾಂತ್ರಿಕ ನಿರ್ವಹಣೆಗೆ ಪ್ರತಿ ತಿಂಗಳು ತಗಲುವ ವೆಚ್ಚ -ಮಹಾರಾಷ್ಟ್ರದಲ್ಲಿ 120.34 ರೂ., ಪಶ್ಚಿಮ ಬಂಗಾಳದಲ್ಲಿ 117.81 ರೂ., ಸಿಕ್ಕಿಂ ರಾಜ್ಯದಲ್ಲಿ 148.88 ರೂ., ಮಣಿಪುರದಲ್ಲಿ 130.30 ರೂ., ಮಧ್ಯಪ್ರದೇಶದಲ್ಲಿ 115.84 ರೂ. ಆಗುತ್ತದೆ. ಕರ್ನಾಟಕದಲ್ಲಿ ಈ ಮೊತ್ತವು ಕೇವಲ 116.65 ರೂ. ಆಗುತ್ತದೆ. ಹೀಗಾಗಿ ಇತರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ದರ ಹೆಚ್ಚಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು,” ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ, ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌. ಶಿವಶಂಕರ್‌ ಉಪಸ್ಥಿತರಿದ್ದರು.

ಸ್ಮಾರ್ಟ್‌ ಮೀಟರ್‌ ವೈಶಿಷ್ಟ್ಯ
ಹಳೆಯ ಮಾದರಿಯ ಮೀಟರ್‌ಗಳಿಗಿಂತ ವಿಶಿಷ್ಟವಾಗಿರುವ ಸ್ಮಾರ್ಟ್‌ ಮೀಟರ್‌ಗಳು ಜಿಪಿಆರ್‌ಎಸ್‌ ಆಧಾರಿತ ಸಂವಹನ ಡೇಟಾ ಸಂಗ್ರಹಣೆಗೆ ಸರ್ವರ್ ಹಾಗೂ ಕ್ಲೌಡ್ ಸಂಪರ್ಕ ಹೊಂದಿರುತ್ತದೆ. ಅಡ್ವಾನ್ಸ್‌ಡ್ ಮೀಟರಿಂಗ್ ಇನ್ಫ್ರಾಸ್ಟ್ರಕ್ಚರ್ (AMI) ತಂತ್ರಜ್ಞಾನದ ಸ್ಮಾರ್ಟ್‌ ಮೀಟರ್‌ಗಳು ವಿದ್ಯುತ್ ಬಳಕೆ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಗ್ರಾಹಕರು ಹಾಗೂ ಎಸ್ಕಾಂಗಳ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದ ವಿದ್ಯುತ್ ಬಳಕೆ, ವೊಲ್ಟೇಜ್, ಪವರ್ ಫ್ಯಾಕ್ಟರ್ ಮಾಹಿತಿ ಹಾಗೂ ರೀಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ. ಮುಂಚಿತವಾಗಿ ಹಣ ಪಾವತಿಸಿ ತಮ್ಮ ಆಯ್ಕೆಯ ದಿನಗಳ ಅವಧಿಗೆ ರಿಜಾರ್ಜ್‌ ಮಾಡಿಕೊಳ್ಳಬಹುದು. ಗ್ರಾಹಕರು ಮುಂಚಿತವಾಗಿ ಹಣ ಪಾವತಿಸಿ ವಿದ್ಯುತ್‌ ಬಳಸಬಹುದಾಗಿದೆ. ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ಗ್ರಾಹಕರು ಬಿಲ್ ಪಾವತಿಸಿದ ತಕ್ಷಣ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ.

ಏನಿದು ಆರ್‌ಡಿಎಸ್ಎಸ್?
ಕೇಂದ್ರ ಇಂಧನ ಪ್ರಾಧಿಕಾರದ ನಿರ್ದೇಶನದಂತೆ 2021-22 ನೇ ಸಾಲಿನಲ್ಲಿ ಕೇಂದ್ರದ ಇಂಧನ ಸಚಿವಾಲಯವು ಪರಿಷ್ಕೃತ ವಿತರಣಾ ವಲಯ ಯೋಜನೆ (RDSS- Revamped Distribution Sector Scheme) ರೂಪಿಸಿತ್ತು. ಈ ಯೋಜನೆ ಒಪ್ಪಿಕೊಂಡಿದ್ದರೆ, ಎಲೆಕ್ಟ್ರಿಕಲ್ ಮೂಲ ಸೌಕರ್ಯವನ್ನು ಒದಗಿಸಲು ಕೇಂದ್ರ ಸರ್ಕಾರ ಶೇ. 60ರಷ್ಟು ಅನುದಾನ ನೀಡುತ್ತಿತ್ತು. ಜತೆಗೆ, ಸ್ಮಾರ್ಟ್ ಮೀಟರ್‌ಗಳ ಬದಲಾವಣೆ ಮಾಡಲು ಒಟ್ಟು ವೆಚ್ಚದ ಶೇ.15ರಷ್ಟು ಅಥವಾ ಗರಿಷ್ಠ 900 ರೂ. ಕೇಂದ್ರ ಸರ್ಕಾರ ನೀಡುತ್ತಿತ್ತು. ಆದರೆ, ರಾಜ್ಯ ಸರ್ಕಾರಗಳು ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಾಕಿ ಇರುವ ಸಬ್ಸಿಡಿ, ಇತರೆ ಬಾಕಿಗಳನ್ನು ಪಾವತಿಸಿದರೆ ಮಾತ್ರ ಯೋಜನೆಯ ಅನುಕೂಲ ಪಡೆದುಕೊಳ್ಳಬಹುದು ಎಂದು ಹೇಳಿತ್ತು. ಅಲ್ಲದೆ, ಎಲ್ಲಾ ಗ್ರಾಹಕರೂ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಹೇಳಿತ್ತು. ಈ ಷರತ್ತುಗಳನ್ನು ಅಂದಿನ ಸರ್ಕಾರ ಒಪ್ಪದ ಕಾರಣ ರಾಜ್ಯವು ಕೇಂದ್ರದ ಆರ್ ಡಿಎಸ್ ಯೋಜನೆಯನ್ನು ಒಪ್ಪಿಕೊಂಡಿರಲಿಲ್ಲ. ಕೇಂದ್ರ ಸರ್ಕಾರದ ಆರ್ ಡಿಎಸ್ ಯೋಜನೆ ಒಪ್ಪಿಕೊಂಡಿದ್ದರೆ, ಹಾಲಿ ಗ್ರಾಹಕರು ಸೇರಿದಂತೆ ಎಲ್ಲರೂ ಸ್ಮಾರ್ಟ್ ಮೀಟರ್ ಅವಡಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇತ್ತು. ಆರ್‌ಡಿಎಸ್ ಯೋಜನೆಯಡಿ ಸ್ಮಾರ್ಟ್ ಮೀಟರ್ ಮತ್ತು ಸಾಫ್ಟ್‌ವೇರ್ ಸೇರಿ ದರ ನಿಗದಿಪಡಿಸಲಾಗುತ್ತದೆ.

- Advertisement -


Must Read

Related Articles