ಬೆಂಗಳೂರು, ಜು.26: ಚುನಾವಣೆಯಲ್ಲಿ ಸೋತಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುವುದು ಪ್ರಜಾಪ್ರಭುತ್ವದ ರೂಢಿ. ಆದರೆ ಶಾಸನ ಸಭೆಯಲ್ಲಿ ಬಹುಮತ ಹೊಂದಿದ್ದ ಪಕ್ಷದ ಮುಖ್ಯಮಂತ್ರಿ ರಾಜೀನಾಮೆ ನೀಡಿದಾಗ, ಅದಕ್ಕೆ ಕಾರಣವನ್ನು ನೀಡಬೇಕಾಗುತ್ತದೆ. ಯಡಿಯೂರಪ್ಪ ರಾಜೀನಾಮೆಗೆ ಕಾರಣ ಅವರ ವಯಸ್ಸೇ ಇಲ್ಲವೇ ಅವರ ಸರ್ಕಾರದ ಭ್ರಷ್ಟಾಚಾರವೇ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಿಜೆಪಿ ಎಂದರೆ ‘ಭ್ರಷ್ಟಾಚಾರ ಜಾರಿ ಪಾರ್ಟಿ’ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಅವರ ಪಕ್ಷದ ಶಾಸಕರೇ ಬಾಯ್ತುಂಬ ಮಾತನಾಡಿದ್ದಾರೆ. ‘ನಾ ಖಾವುಂಗಾ, ನಾ ಖಾನೆ ದೂಂಗಾ’ ಎಂದು ಹೇಳುತ್ತಿರುವ ನರೇಂದ್ರ ಮೋದಿ ಅವರಿಗೆ ಒಂದಿಷ್ಟು ಮರ್ಯಾದೆ ಇದ್ದರೆ, ಯಡಿಯೂರಪ್ಪನವರ ಮೇಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಒಬ್ಬ ಭ್ರಷ್ಟ ಮುಖ್ಯಮಂತ್ರಿಯನ್ನು ತೆಗೆದು ಇನ್ನೊಬ್ಬ ಭ್ರಷ್ಟನನ್ನು ಮುಖ್ಯಮಂತ್ರಿ ಮಾಡಿದರೆ ಸಾಮಾನ್ಯ ಜನರಿಗೇನು ಲಾಭ? ಅದರ ಬದಲು ಅಧಿಕಾರ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿರುವ ಬಿಜೆಪಿ ಪಕ್ಷವೇ ಅಧಿಕಾರ ಬಿಟ್ಟು ತೊಲಗಿದರೆ ಜನ ನೆಮ್ಮದಿಯ ಬದುಕು ನಡೆಸುವಂತಾಗುತ್ತದೆ. ಯಡಿಯೂರಪ್ಪ ಅವರ ಬಗ್ಗೆ ನನಗೆ ಅನುಕಂಪವಿದೆ. ಅವರಿಗೆ ವಯಸ್ಸಾಯಿತೆಂದು ಅವರ ಪಕ್ಷದ ದೆಹಲಿ ನಾಯಕರೇ ಹೇಳುತ್ತಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ, ಅವರಿಗೆ ನೆಮ್ಮದಿ ಸಿಗಲಿ ಎಂದಷ್ಟೇ ನಾನು ಆಶಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.