Home ಟಾಪ್ ಸುದ್ದಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ: ಸಿದ್ದರಾಮಯ್ಯ

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ: ಸಿದ್ದರಾಮಯ್ಯ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ರಾಜ್ಯದ ಅಥವಾ ರಾಷ್ಟ್ರದ ವಿಚಾರಗಳ ಮೇಲೆ ನಡೆಯಲ್ಲ, ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆ ಫಲಿತಾಂಶ ಬರುತ್ತದೆ. ಈ ಫಲಿತಾಂಶವನ್ನು ಮುಂದಿನ ತಾಲೂಕು, ಜಿಲ್ಲಾ ಪಂಚಾಯತ್ ಹಾಗೂ ಬಿಬಿಎಂಪಿ ಚುನಾವಣೆಗಳ ದಿಕ್ಸೂಚಿ ಎಂದು ಹೇಳಲು ಆಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.


ಮೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಈ ಮೂರು ಮಹಾ ನಗರ ಪಾಲಿಕೆ, ತರೀಕೆರೆ, ದೊಡ್ಡಬಳ್ಳಾಪುರ ಹಾಗೂ ಮೈಸೂರಿನ ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ನೀಡಿದ ಎಲ್ಲಾ ಮತದಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಬೆಳಗಾವಿಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ, 58 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಮಾತ್ರ ನಾವು ಗೆದ್ದಿದ್ದು, ಬಿಜೆಪಿ ಪಕ್ಷ ಬಹುಮತ ಗಳಿಸಿದೆ. ಹುಬ್ಬಳ್ಳಿಯಲ್ಲಿ ನಮ್ಮ ಪಕ್ಷ ಬಹುಮತ ಗಳಿಸುವ ನಿರೀಕ್ಷೆಯಿತ್ತು, ಆದರೆ ಫಲಿತಾಂಶ ಬೆರೆಯದೇ ರೀತಿ ಬಂದಿದೆ. ನಮ್ಮ ಪಕ್ಷ 33 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 39 ಸ್ಥಾನ ಗೆದ್ದಿದ್ದು, ಯಾವೊಂದು ಪಕ್ಷಕ್ಕೂ ಬಹುಮತ ಬಂದಿಲ್ಲ, ಇನ್ನು ಕಲಬುರ್ಗಿಯಲ್ಲಿ ನಮ್ಮ ಪಕ್ಷ 26, ಬಿಜೆಪಿ 24, ಜೆಡಿಎಸ್ 3 ಸ್ಥಾನ ಹಾಗೂ ಒಂದು ಪಕ್ಷೇತರ ಅಭ್ಯರ್ಥಿ ಗೆದ್ದಿದ್ದು. ಇಲ್ಲೂ ಸಹ ಯಾವ ಪಕ್ಷವೂ ಬಹುಮತ ಪಡೆದಿಲ್ಲ ಎಂದರು.


ತರೀಕೆರೆ ಪಾಲಿಕೆ ಚುನಾವಣೆಯ 23 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ 15 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ ಏಕೈಕ ಸ್ಥಾನ ಗೆದ್ದಿದೆ. ದೊಡ್ಡಬಳ್ಳಾಪುರದಲ್ಲೂ ಕೂಡ ಯಾವ ಪಕ್ಷಕ್ಕೂ ಬಹುಮತ ದೊರೆತಿಲ್ಲ. ಮೈಸೂರಿನ ಒಂದು ಪಾಲಿಕೆ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಕೇಂದ್ರ ಸಚಿವರಿದ್ದಾರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದಾರೆ, ಬಿಜೆಪಿಯ ಹಲವು ಮಂದಿ ಶಾಸಕರಿದ್ದಾರೆ. ಹೀಗಾಗಿ ನಮಗೆ ಹಿನ್ನೆಡೆಯಾಗಿದೆ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.
ಸರ್ಕಾರ ಅವರ ಕೈಯಲ್ಲಿದೆ, ಸಂಪನ್ಮೂಲಗಳು ನಮಗಿಂತ ಹೆಚ್ಚು ಅವರ ಬಳಿಯಿದೆ. ಅಧಿಕಾರಿಗಳು ಅವರ ಪರವಾಗಿ ಕೆಲಸ ಮಾಡ್ತಾರೆ. ಕಲಬುರ್ಗಿ ಪೊಲೀಸ್ ಕಮಿಷನರ್ ನಮ್ಮ ಪಕ್ಷದ ಶಾಸಕರ ಸಂಬಂಧಿಕರಿಗೆ ಹೊಡೆದು, ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಕಾರ್ಯಕರ್ತರಂತೆ ವರ್ತಿಸಿದ್ದಾರೆ. ಇದು ಒಂದು ಉದಾಹರಣೆ ಅಷ್ಟೆ. ಹುಬ್ಬಳ್ಳಿ ಧಾರವಾಡದಲ್ಲಿ ನಾವು 33 ಸ್ಥಾನಗಳನ್ನು ಗೆದ್ದಿರುವುದು ನಮಗೆ ಒಂದು ಧನಾತ್ಮಕ ಬೆಳವಣಿಗೆ. ಬೆಳಗಾವಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ನಾವು ಹತ್ತು ಹನ್ನೆರಡು ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು ಆದರೆ ಒಂಭತ್ತು ಸ್ಥಾನ ಗೆದ್ದಿದ್ದೆವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಿಕೊಳ್ಳಬೇಕು. ನಾವು ಈ ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನು ಒಪ್ಪಿಕೊಂಡು, ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

ರಾಜ್ಯದ ಜನರ ಒಲವು ಬಿಜೆಪಿ ಪರವಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿಯಲ್ಲಿ ನಾವು ಅಧಿಕಾರಕ್ಕೆ ಬರುವ ನಿರೀಕ್ಷೆ ಮೊದಲಿಂದಲೂ ಇರಲಿಲ್ಲ, ಆದರೆ ಬಿಜೆಪಿಯೂ ಬಹುಮತ ಪಡೆಯಲ್ಲ ಎಂದು ಅಂದುಕೊಂಡಿದ್ದೆವು. ಆದರೆ ಬಿಜೆಪಿ ಬಹುಮತ ಪಡೆದಿದೆ. ಇದನ್ನು ಬಿಟ್ಟರೆ ಹುಬ್ಬಳ್ಳಿ ಧಾರವಾಡದಲ್ಲಿ ಬಿಜೆಪಿ ಏಕೆ ಬಹುಮತ ಪಡೆದಿಲ್ಲ? ಕಲಬುರ್ಗಿಯಲ್ಲಿ ಬಿಜೆಪಿ ಬಹುಕತ ಪಡೆದಿದೆಯೇ? ಇದನ್ನು ಬಿಜೆಪಿ ಪರ ಒಲವು ಅಂತ ಹೇಳಲು ಆಗುತ್ತಾ? ಇದು ಜನರ ಒಲವು ಅಲ್ಲ, ಬಿಜೆಪಿಯವರು ಹಣ ಹಾಗೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪಡೆದಿರುವ ಗೆಲುವಷ್ಟೆ.


ಈ ಹಿಂದೆ ಗ್ರಾಮ ಪಂಚಾಯತಿ ಚುನಾವಣೆ ವೇಳೆಯಲ್ಲೂ ಬಿಜೆಪಿಯವರು ಹೀಗೆಯೇ ಹೇಳಿದ್ದರು, ಆದರೆ ಹೆಚ್ಚು ಸ್ಥಾನವನ್ನು ನಾವು ಗೆದ್ದಿದ್ದೆವು. ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ.
ಬೆಳಗಾವಿಯಲ್ಲಿ ಬಿಜೆಪಿ ಬಹುಮತ ಗಳಿಸಿದ್ದರೆ, ಕಲಬುರ್ಗಿಯಲ್ಲಿ ನಾವು ಬಹುಮತ ಪಡೆದಿದ್ದೇವೆ. ಇನ್ನುಳಿದ ಕಡೆ ಯಾವ ಪಕ್ಷವೂ ಸ್ಪಷ್ಟ ಬಹುಕತ ಪಡೆದಿಲ್ಲ ಹೀಗಾಗಿ ಇದು ಕಾಂಗ್ರೆಸ್ನ ಸೋಲಲ್ಲ. ಈ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆ ಎಂಬುದು ನನ್ನ ಭಾವನೆ.


ಹುಬ್ಬಳ್ಳಿ ಧಾರವಾಡದಲ್ಲಿ ಬಿಜೆಪಿಯ ಕೇಂದ್ರ ಸಚಿವರರು, ಮುಖ್ಯಮಂತ್ರಿ ಬೊಮ್ಮಾಯಿ, ಹಲವು ಶಾಸಕರು ಇದ್ದ ಹೊರತಾಗಿಯೂ ಅವರು ಗೆದ್ದಿರುವುದು 39 ಸ್ಥಾನಗಳು ಮಾತ್ರ, ನಮ್ಮ ಪಕ್ಷದ ಒಬ್ಬನೇ ಒಬ್ಬ ಶಾಸಕ ಇದ್ದರೂ ನಾವು 33 ಸ್ಥಾನಗಳನ್ನು ಗೆದ್ದಿದ್ದೇವೆ. ಒಟ್ಟಿನಲ್ಲಿ ಮತದಾರರು ಬಿಜೆಪಿಯನ್ನು ತಿರಸ್ಕಾರ ಮಾಡಿದೆ. ನಾನು ಯಾವತ್ತೂ ಪಾಲಿಕೆ ಚುನಾವಣೆಯ ಪ್ರಚಾರಕ್ಕೆ ಹೋಗಿಲ್ಲ, ಹಾಗೆ ಈ ಬಾರಿಯೂ ಹೋಗಿಲ್ಲ. ಇದರಲ್ಲಿ ಹೊಸತೇನಿದೆ? ನಾನು ಚುನಾವಣಾ ಪ್ರಚಾರಕ್ಕೆ ಹೋಗದಿರುವುದು ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡಂತೆ ಎಂದು ಹೇಳುವ ನಳಿನ್ ಕುಮಾರ್ ಕಟೀಲ್ ಕಲಬುರಗಿ, ಹುಬ್ಬಳ್ಳಿ, ಧಾರವಾಡಕ್ಕೆ ಎಷ್ಟು ಬಾರಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ? ಸ್ಥಳೀಯ ಸಂಸ್ಥೆಗಳ ಚುನಾವಣೆಯ ಜವಾಬ್ದಾರಿ ಸ್ಥಳೀಯ ನಾಯಕರು ಮಾಡ್ತಾರೆ, ಅದಕ್ಕೆ ರಾಜ್ಯ ಮಟ್ಟದ ನಾಯಕರು ಯಾರು ಹೋಗಲ್ಲ.


ತಾಲಿಬಾನಿಗಳಿಂದ ಭಾರತದಲ್ಲಿ ಬೆಲೆಯೇರಿಕೆ ಆಗುತ್ತಿದೆ ಎಂಬ ಅರವಿಂದ ಬೆಲ್ಲದ್ ಹೇಳಿಕೆ ದಡ್ಡತನದ ಪರಮಾವಧಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಆಗಿದೆಯಾ ಎಂಬುದು ಮುಖ್ಯ. ಈಗ ಕಚ್ಚಾ ತೈಲ ಬೆಲೆ ಎಷ್ಟಿದೆ? ಹಿಂದೆ ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗ ಎಷ್ಟಿತ್ತು ಎಂದು ನೋಡಬೇಕಲ್ಲವೇ? ಹಿಂದೆ ಕಚ್ಚಾ ತೈಲ ದರ ಬ್ಯಾರಲ್ ಒಂದಕ್ಕೆ 120 ಡಾಲರ್ ದಾಟಿತ್ತು ಆಗ ಪೆಟ್ರೋಲ್ ಬೆಲೆ 71 ರೂಪಾಯಿ ಇತ್ತು, ಈಗ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 45 ಡಾಲರ್ ಇದೆ, ಪೆಟ್ರೋಲ್ ಬೆಲೆ 105 ರೂಪಾಯಿ ಆಗಿದೆ. ಇದು ಜನರ ಮೇಲಿನ ಅನಗತ್ಯ ಹೊರೆಯಲ್ಲವೇ? ಜನ ಇದನ್ನು ಖುಷಿಯಿಂದ ಸ್ವೀಕರಿಸಿ, ಹೆಚ್ಚು ದುಡ್ಡು ಕೊಟ್ಟು ಖರೀದಿ ಮಾಡುವುದಾದರೆ ನನ್ನ ಅಭ್ಯಂತರವಿಲ್ಲ.


80 ರೂಪಾಯಿ ಇದ್ದ ಅಡುಗೆ ಎಣ್ಣೆ 200 ರೂಪಾಯಿ ಆಗಿದೆ, ಇದಕ್ಕೆ ತಾಲಿಬಾನಿಗಳು ಕಾರಣವೇ? ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿ, ಪೆಟ್ರೋಲ್ ದರ ಏರಿಕೆಗೆ ತಾಲಿಬಾನಿಗಳು ಕಾರಣ ಎಂದರೆ ಹೇಗೆ?. ತಾಲೂಕು ಹಾಗೂ ಜಿಲ್ಲಾ ಪಂಚಾಯತ ಚುನಾವಣೆಗೆ ಸಂಬಂಧಿಸಿದ ಮೀಸಲಾತಿ ಆಯೋಗ ರಚನೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಇದೆಲ್ಲ ಕಾಲಹರಣ ಮಾಡಲು ನೆಪಗಳು ಅಷ್ಟೆ. ಈಗಲೇ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಧೈರ್ಯವಿಲ್ಲ. ಸೋಲಿನ ಭಯದಿಂದ ಚುನಾವಣೆ ಮುಂದೂಡಲು ಹೊರಟಿದ್ದಾರೆ ಎಂದರು. ಇದೇ ಕಾರಣಕ್ಕೆ ಯಾರಾದರೂ ನ್ಯಾಯಾಲಯದ ಮೊರೆ ಹೋಗಿ, ಇನ್ನಷ್ಟು ವಿಳಂಬವಾಗಲಿ ಎಂದು ಕಾನೂನು ಬಾಹಿರವಾಗಿ ನೊಟಿಫಿಕೇಷನ್ ಹೊರಡಿಸಿದ್ದಾರೆ. ಮೀಸಲಾತಿ ನಿಯಮಕ್ಕೆ ಸಂಬಂಧಿಸಿದ 2000 ಹೆಚ್ಚು ಮನವಿಗಳು ಈಗಾಗಲೇ ನ್ಯಾಯಾಲಯದ ಮುಂದಿದೆ. ಚುನಾವಣೆಯಲ್ಲಿ ಸಾಧ್ಯವಾದಷ್ಟು ಮುಂದಕ್ಕೆ ತಳ್ಳುವುದೇ ಬಿಜೆಪಿಯವರ ಉದ್ದೇಶ ಎಂದು ಸಿದ್ದರಾಮಯ್ಯ ತಿಳಿಸಿದರು

Join Whatsapp
Exit mobile version