Home ಟಾಪ್ ಸುದ್ದಿಗಳು ರೈತರ ಪ್ರತಿಭಟನೆ: ಸಿಂಘು ಗಡಿ ತೆರವುಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಕಾರ

ರೈತರ ಪ್ರತಿಭಟನೆ: ಸಿಂಘು ಗಡಿ ತೆರವುಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸಿಂಘು ಗಡಿಯಿಂದ ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಹರಿಯಾಣದ ಸೋನಿಪತ್ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದೆ. ಪ್ರಯಾಣಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ತೆರವಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.


ಸ್ಥಳೀಯ ಪರಿಸ್ಥಿತಿ ಮತ್ತು ಸಮಸ್ಯೆಗಳ ಬಗ್ಗೆ ಹೈಕೋರ್ಟ್ ಹೆಚ್ಚು ತಿಳಿದಿರುವುದರಿಂದ ಮತ್ತು ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಆಗದಿರುವುದರಿಂದ ಪ್ರಕರಣವನ್ನು ಸಂಬಂಧಪಟ್ಟ ಹೈಕೋರ್ಟ್ ವಿಚಾರಣೆಗೆ ಒಳಪಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
“ನಾವು ನಿಮಗೆ (ಪ್ರಕರಣ) ಹಿಂಪಡೆದುಕೊಳ್ಳಲು ಮತ್ತು ಹೈಕೋರ್ಟ್ಗೆ ಹೋಗಲು ಅನುಮತಿ ನೀಡಬಹುದು. ಸೋನಿಪತ್ ನಿವಾಸಿಯಾಗಿರುವ ನೀವು ಹೈಕೋರ್ಟನ್ನು ಏಕೆ ಸಂಪರ್ಕಿಸಬಾರದು? ಈ ಅರ್ಜಿಗಳನ್ನು ಪ್ರಚಾರಕ್ಕಾಗಿ ಏಕೆ ಇಲ್ಲಿ ಸಲ್ಲಿಸಲಾಗಿದೆ? ಸ್ಥಳೀಯ ಪರಿಸ್ಥಿತಿ ಮತ್ತು ಸಮಸ್ಯೆಗಳ ಬಗ್ಗೆ ಹೈಕೋರ್ಟ್ಗಳು ಚೆನ್ನಾಗಿ ತಿಳಿದಿರುವಾಗ ನಾವು ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ನಾವು ಹೈಕೋರ್ಟ್ಗಳ ಬಗ್ಗೆ ವಿಶ್ವಾಸವಿಡಬೇಕು”ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ದೆಹಲಿಗೆ ಪ್ರಯಾಣಿಸುವ ವ್ಯಕ್ತಿಗಳಿಗೆ ಎದುರಾಗುತ್ತಿರುವ ತೊಂದರೆಗಳನ್ನು ಪ್ರಸ್ತಾಪಿಸಿ ಅರ್ಜಿದಾರರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರರ ಪರ ಹಾಜರಾದ ವಕೀಲ ಅಭಿಮನ್ಯು ಭಂಡಾರಿ, ಹರಿಯಾಣದಿಂದ ದೆಹಲಿಗೆ ಪ್ರಯಾಣಿಸುವ ಜನರಿಗೆ ಸಿಂಘು ಗಡಿ ‘ಹೊಕ್ಕುಳಬಳ್ಳಿ’ಯಂತೆ ಇದೆ ಎಂದರು. ಆಗ ಪೀಠ, ‘ಹೈಕೋರ್ಟ್ ಅದನ್ನು ನೋಡಿಕೊಳ್ಳುತ್ತದೆ’ ಎಂದಿತು.


ಮುಂದುವರೆದು, “ಪ್ರತಿಭಟನೆಯ ಸ್ವಾತಂತ್ರ್ಯ ಮತ್ತು ಮೂಲ ಸೌಕರ್ಯಗಳನ್ನು ಪಡೆಯುವ ಸ್ವಾತಂತ್ರ್ಯದೊಂದಿಗೆ ಸಮತೋಲನವನ್ನು ಕಾಯ್ದುಕೊಳ್ಳಲಿರುವ ಹೈಕೋರ್ಟ್ ಅನ್ನು ಸಂಪರ್ಕಿಸುವ ಸ್ವಾತಂತ್ರ್ಯ ಅರ್ಜಿದಾರರಿಗೆ ಇದೆ. ಇಲ್ಲಿ ಯಾವುದೇ ಮೂಲಭೂತ ಹಕ್ಕಿನ ಗಂಭೀರ ಉಲ್ಲಂಘನೆಯಾಗಿಲ್ಲ. ನಾವು (ಸುಪ್ರೀಂ ಕೋರ್ಟ್) ನ್ಯಾಯಾಶ್ರಯಕ್ಕೆ ಎಡತಾಕುವ ಮೊದಲ ನ್ಯಾಯಾಲಯವಾಗಬಾರದು” ಎಂದು ಇದೇ ವೇಳೆ ಪೀಠ ತಿಳಿಸಿತು.


ಅರ್ಜಿದಾರರು ನಂತರ ಹೈಕೋರ್ಟ್ ಸಂಪರ್ಕಿಸಲು ಸ್ವಾತಂತ್ರ್ಯ ಕೋರಿದರು. ಆದರೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಅದರ ಬಗ್ಗೆ ಏನನ್ನೂ ಹೇಳಲು ನಿರಾಕರಿಸಿತು. “ನಾವು ಹೈಕೋರ್ಟ್ಗೆ ಏಕೆ ಕೇಳಬೇಕು? ಇದು ಮಾನವೀಯ ಸಮಸ್ಯೆ, ಹೈಕೋರ್ಟ್ ಅದನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸುತ್ತದೆ” ಎಂದು ನ್ಯಾಯಾಲಯ ತಿಳಿಸಿತು. ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕೆನ್ನುವ ‘ಸೆಳೆತ’ ಉಂಟಾಗುತ್ತದಾದರೂ, (ದೇಶದ) ದಕ್ಷಿಣದಲ್ಲಿ ಇದೇ ರೀತಿಯ ಗಡಿ ದಿಗ್ಬಂಧನ ಸಮಸ್ಯೆ ಉದ್ಭವಿಸಿದರೆ ತಾನು ಆಗ ಮಧ್ಯಪ್ರವೇಶಕ್ಕೆ ಮುಂದಾಗುತ್ತೇನೆಯೇ ಎಂದು ಸ್ವತಃ ಕೇಳಿಕೊಳ್ಳಬೇಕಾಗುತ್ತದೆ ಎಂದು ಪೀಠವು ತಾನು ಇಂತಹ ವಿಚಾರಗಳಲ್ಲಿ ಸ್ವನಿಯಂತ್ರಣ ಸಾಧಿಸಬೇಕಾದ ಮಹತ್ವವನ್ನು ಹೇಳಿತು.


“ಮಧ್ಯಪ್ರವೇಶಿಸಬೇಕೆಂಬ ಆಹ್ವಾನ ಪ್ರಲೋಭನಕಾರಿಯಾಗಿದೆ, ಆದರೆ ಕರ್ನಾಟಕದಲ್ಲಿಯೋ, ಮತ್ತಿನ್ನೆಲ್ಲೋ ಗಡಿ ಸಮಸ್ಯೆ ಇದ್ದರೆ ನಾವು ಹಾಗೆ ಮಾಡುತ್ತೇವೆಯೇ? ಇದಕ್ಕೆಲ್ಲಾ ಅಂತ್ಯವಿಲ್ಲ” ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು. ಪರಿಣಾಮ ಅರ್ಜಿದಾರರು ಮನವಿ ಹಿಂಪಡೆದರು.
(ಕೃಪೆ: ಬಾರ್ ಆ್ಯಂಡ್ ಬೆಂಚ್)

Join Whatsapp
Exit mobile version